ಸಾಗರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿರುವ ಸಚಿವ ಸ್ಥಾನಕ್ಕೆ ಅಮಿತ್ ಷಾ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಗುರುವಾರ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ಅತ್ಯಂತ ಕೆಳಮಟ್ಟದಲ್ಲಿ ಮಾತನಾಡಿದ್ದಾರೆ. ಈ ಮೂಲಕ ಮನುವಾದಿಗಳು ತಮ್ಮ ಮನಸ್ಸಿನಲ್ಲಿರುವ ಸತ್ಯವನ್ನು ಪ್ರಜಾಪ್ರಭುತ್ವದ ವೇದಿಕೆ ಲೋಕಸಭೆಯಲ್ಲಿ ಹೇಳುವ ಮೂಲಕ ತಮ್ಮ ಸುಪ್ತಸಿದ್ಧಾಂತವನ್ನು ಹೊರಹಾಕಿದ್ದಾರೆ ಎಂದು ದೂರಿದರು,
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದ ವಿವಿಧ ಭಾಗಗಳಲ್ಲಿ ಪಕ್ಷದ ಶಾಸಕರು, ಸಂಸದರು ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಈಗ ಅದರ ಮುಂದುವರಿದ ಭಾಗವಾಗಿದೆ. ರಾಷ್ಟ್ರಪತಿ ಅವರು ತಕ್ಷಣ ಮಧ್ಯಪ್ರವೇಶಿಸಿ, ಅಮಿತ್ ಷಾ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ಸಮಿತಿಯ ತಾಲೂಕು ಸಂಚಾಲಕ ರೇವಪ್ಪ ಹೊಸಕೊಪ್ಪ, ನಾಗರಾಜ ಗುಡ್ಡೆಮನೆ, ಅಣ್ಣಪ್ಪ ಪೂಜಾರಿ, ಗಣಪತಿ ವಡ್ನಾಲ, ಗೌರಮ್ಮ, ಉಮಾ, ಜಗನ್ನಾಥ್, ರವಿ, ಮಹಾದೇವಪ್ಪ, ಸೋಮಣ್ಣ, ಚಂದ್ರಣ್ಣ, ಶಶಿಕುಮಾರ್, ಶೇಖರ್, ಮಹೇಶ್ ಇತರರಿದ್ದರು.