ನ್ಯೂಸ್

ಶಾಲಾ ಮಕ್ಕಳಿಗಾಗಿ ಡಿಎಸ್‌ಇಆರ್‌ಟಿ ‘ದ್ವಿಭಾಷಾ ನಿಘಂಟು’ ಪ್ರಕಟ: ಏನೆಲ್ಲಾ ವಿಶೇಷತೆ ಇದೆ?

ಎನ್.ಎಲ್. ಶಿವಮಾದು

ಬೆಂಗಳೂರು: ಪದ ಉಚ್ಚಾರಣೆ, ವಾಕ್ಯ ರಚನೆ, ಇಂಗ್ಲಿಷ್ ಪದಗಳಿಗೆ ಕನ್ನಡ ಅನುವಾದ ಸೇರಿ ಹಲವಾರು ತೊಡಕುಗಳನ್ನು ಎದುರಿಸುತ್ತಿರುವ ಶಾಲಾ ಮಕ್ಕಳಿಗೆ ಅನುಕೂಲವಾಗುವಂತಹ ‘ದ್ವಿ ಭಾಷಾ ನಿಘಂಟು’ ವನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಡಿಎಸ್‌ಇಆರ್‌ಟಿ) ಹೊರತಂದಿದೆ.

ಇತ್ತೀಚಿನ ವರ್ಷಗಳಲ್ಲಿ ಪ್ರೌಢಶಾಲೆಯಲ್ಲಿ ಪ್ರವೇಶ ಪಡೆದರೂ ಪ್ರಾಥಮಿಕ ಶಾಲಾ ಹಂತದ ಕಾಗುಣಿತ ಮತ್ತು ಗಣಿತ ಲೆಕ್ಕಗಳಲ್ಲಿ ಮಕ್ಕಳು ಹಿಂದುಳಿದಿರುವುದು ಶಿಕ್ಷಣ ಇಲಾಖೆಯ ಸಮೀಕ್ಷೆಗಳಲ್ಲಿಯೇ ಬಹಿರಂಗವಾಗಿದೆ. ಮಕ್ಕಳಿಗೆ ಪಾಠ ಹೇಳಿಕೊಡಬೇಕಾ, ಕಾಗುಣಿತ ಮತ್ತು ಲೆಕ್ಕ ಹೇಳಿಕೊಡಬೇಕಾ ಎಂಬುದೇ ದೊಡ್ದ ಚಿಂತೆಯಾಗಿದೆ ಎಂದು ಹಲವು ಪ್ರೌಢಶಾಲಾ ಶಿಕ್ಷಕರು ಅಸಹಾಯಕ ನುಡಿಗಳನ್ನು ಆಡಿರುವುದು ಗೊತ್ತೇ ಇದೆ.

ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪದ ಉಚ್ಚಾರ, ವಾಕ್ಯ ರಚನೆ, ಕನ್ನಡ ಮತ್ತು ಇಂಗ್ಲಿಷ್ ಜ್ಞಾನದ ಸಂಪಾದನೆ ಸೇರಿ ಹಲವು ರೀತಿಯಲ್ಲಿ ‘ದ್ವಿಭಾಷಾ ನಿಘಂಟು’ ಉಪಕಾರಿಯಾಗಲಿದೆ.

ಸಾಮಾನ್ಯಕ್ಕೂ ಈ ನಿಘಂಟಿಗೂ ವ್ಯತ್ಯಾಸವೇನು?

ಮಾರುಕಟ್ಟೆಯಲ್ಲಿ ಈಗಾಗಲೇ ಹತ್ತಾರು ಬಗೆಯ ನಿಘಂಟುಗಳು ಲಭ್ಯವಾಗುತ್ತಿವೆ. ಅವುಗಳಲ್ಲಿ ಒಂದು ಪದಕ್ಕೆ ಅದೇ ಅರ್ಥ ಕೊಡುವ ಹಲವಾರು ಪದಗಳು, ಸಮಾನಾರ್ಥಕ ಪದ, ವಿರುದ್ಧಾರ್ಥಕ ಪದಗಳನ್ನು ತಿಳಿಯಬಹುದಾಗಿದೆ.

ಅವುಗಳಿಗೂ ಸರ್ಕಾರ ಪ್ರಕಟಿಸಿರುವ ನಿಘಂಟಿಗೂ ಸಾಕಷ್ಟು ವ್ಯತ್ಯಾಸವಿದೆ. ಅಕ್ಷರ, ಅಕ್ಷರಕ್ಕೆ ಕನ್ನಡ ವಾಕ್ಯ ರಚನೆ, ಇಂಗ್ಲಿಷ್ ವಾಕ್ಯ ರಚನೆ, ಸಕ್ರಿಯ ಚಟುವಟಿಕೆಗಳಿಂದ ಕೂಡದ ಚಿತ್ರ, ಪದದ ಉಚ್ಚಾರಣೆಯನ್ನು ಯಾವ ರೀತಿಯಲ್ಲಿ ಮಾಡಬೇಕು ಎಂಬ ಹಲವು ವಿಷಯಗಳನ್ನು ನೀಡಲಾಗಿದೆ.

‘ಅ’ದಿಂದ ‘ಳ’ವರೆಗೂ ಎಲ್ಲ ಪದಗಳಿಗೂ ಅರ್ಥ, ವಾಕ್ಯ ರಚನೆ ನೀಡಲಾಗಿದೆ.

ತರಗತಿ, ವಿಷಯವಾರು ಪದ:

1 ರಿಂದ 5ನೇ ತರಗತಿ ಹಾಗೂ 6ರಿಂದ 8ನೇ ತರಗತಿಗೆ ಸೇರಿ ಎರಡು ನಿಘಂಟುವನ್ನು ಸಿದ್ಧಪಡಿಸಿದೆ. ಆಯಾ ತರಗತಿಯ ಪಾಠದಲ್ಲಿ ಬಳಸಲಾಗಿರುವ ಪದಗಳಿಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ತಿಳಿಸಲಾಗಿದೆ. ಒಂದು ವೇಳೆ ಪಠ್ಯಕ್ರಮ ಮತ್ತು ಪಾಠಗಳ ಬದಲಾದರೂ ಸಾಮಾನ್ಯವಾಗಿ ಬಳಸುವಂತಹ ಪದಗಳನ್ನು ನೀಡಲಾಗಿದೆ. ಕನ್ನಡ, ಪರಿಸರ ಅಧ್ಯಯನ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಹಿಂದಿ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಅರ್ಥ ಕೊಡಲಾಗಿದೆ.

ಗ್ರಾಮೀಣ, ಕನ್ನಡ ಮಾಧ್ಯಮಕ್ಕೆ ಹೆಚ್ಚು ಸಹಕಾರಿ

ಸಾಮಾನ್ಯವಾಗಿ ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದರೂ ಇಂಗ್ಲಿಷ್ ಸಂವಹನದಲ್ಲಿ ಹಿಂದುಳಿಯಲಿದ್ದಾರೆ. ಸರ್ಕಾರಿ ಶಾಲೆ ಹಾಗು ಹಳ್ಳಿ ಮಕ್ಕಳಿಗೆ ಇಂಗ್ಲಿಷ್ ಎಂದರೆ ಹಿಂಜರಿಕೆ ಹುಟ್ಟಿಸುವುದು ಸಹಜವಾಗಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಈ ನಿಘಂಟು ಸಿದ್ಧಪಡಿಸಲಾಗಿದೆ.

ಎಂಟನೇ ತರಗತಿವರೆಗೂ ಪಾಠದಲ್ಲಿರುವ ಬಹುತೇಕ ಪದಗಳ ವಾಕ್ಯ ರಚನೆ ನೀಡಿರುವುದರಿಂದ ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲಿಷ್ ಅನ್ನು ಜತೆಜತೆಗೆ ಕಲಿಯಲಿದ್ದಾರೆ. ಇದರಿಂದ ಇಂಗ್ಲಿಷ್ ಭಯ ಕೂಡ ಹೋಗಲಾಡಿಸಬಹುದಾಗಿದೆ. ಪಿಯುಸಿನಲ್ಲಿ ವಿಜ್ಞಾನ ವಿಭಾಗಕ್ಕೆ ಸೇರುವವರಿಗೆ ಹಾಗೂ ಸಿಇಟಿ, ನೀಟ್‌ನಂತಹ ಪರೀಕ್ಷೆಗಳಿಗೂ ಸಹಾಯಯಕ್ಕೆ ಬರಲಿದೆ.

ಶಿಕ್ಷಕರು, ಪಾಲಕರಿಗೂ ಉಪಯೋಗ

ಬರೀ ಮಕ್ಕಳಿಗೆ ಮಾತ್ರವಲ್ಲ, ಕನ್ನಡ ಮಾಧ್ಯಮದಲ್ಲಿ ಓದಿಕೊಂಡು ಬಂದಿರುವ ಶಿಕ್ಷಕರಿಗೆ, ಮನೆಯಲ್ಲಿ ಮಕ್ಕಳಿಗೆ ಮನೆಯ ಪಾಠ ಹೇಳಿಕೊಡುವ ಪಾಲಕ/ಪೋಷಕರಿಗೂ ಇದು ಸಹಕಾರಿಯಾಗಲಿದೆ.

2 ವರ್ಷದ ಶ್ರಮದ ಲ, ಬಾಲ್ ಭಾರತ್ ಸಾಥ್

ರಾಜ್ಯದಲ್ಲಿ ಈ ನಿಘಂಟು ಮಾಡುವ ಮುನ್ನ ಆಂಧ್ರ ಪ್ರದೇಶದಲ್ಲಿ ಬಾಲ್ ರಕ್ಷಾ ಭಾರತ್ (ಸೇವ್ ದಿ ಚಿಲ್ಡ್‌ರನ್) ಎಂಬ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಅಲ್ಲಿನ ರಾಜ್ಯ ಸರ್ಕಾರದ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ನಿಘಂಟು ಪ್ರಕಟಿಸಿತ್ತು. ರಾಜ್ಯ ಸರ್ಕಾರಕ್ಕೂ ಎನ್‌ಜಿಒ ಪ್ರಸ್ತಾವನೆ ಸಲ್ಲಿಸಿತ್ತು. 2022ರಿಂದ ಇಲ್ಲಿಯವರೆಗೂ ನಿರಂತರ 2 ವರ್ಷಗಳ ಶ್ರಮದ ಲವಾಗಿ ನಿಘಂಟು ಪ್ರಕಟಿಸಲಾಗಿದೆ.

ನಿಘಂಟಿನ ವಿಶೇಷತೆ ಏನು? ಪದ- ‘ಎ’ ಇಂಗ್ಲಿಷ್- Ability ಕನ್ನಡ- ಸಾಮರ್ಥ್ಯ ವಾಕ್ಯ ರಚನೆ (ಇಂಗ್ಲಿಷ್)- She has the ability to play the piano ವಾಕ್ಯ ರಚನೆ- ಅವಳಿಗೆ ಪಿಯಾನೊ ನುಡಿಸುವ ಸಾಮರ್ಥ್ಯವಿದೆ ಪಠ್ಯಾಧಾರಿತ ಚಿತ್ರ ಸಹಿತ ನಿಘಂಟಾಗಿದೆ ಹಿಂದಿಯಿಂದ ಕನ್ನಡ, ಇಂಗ್ಲಿಷಿನಿಂದ ಕನ್ನಡ, ಕನ್ನಡದಿಂದ ಕನ್ನಡಕ್ಕೆ ಅರ್ಥ ಕೊಡಲಾಗಿದೆ ತರಗತಿ ಶಿಕ್ಷಕರು ಹಾಗೂ ಇಲಾಖೆ ಅಧಿಕಾರಿಗಳೇ ರಚಿಸಿರುವ ನಿಘಂಟು

ಶಾಲಾ ಹಂತದಲ್ಲಿಯೇ ಸ್ಪಷ್ಟ ಪದ ಉಚ್ಚಾರಣೆ, ವಾಕ್ಯ ರಚನೆಗೆ ಅನುಕೂಲವಾಗುಮತಹ ನಿಘಂಟನ್ನು ಸಿದ್ಧಪಡಿಸಲಾಗಿದೆ. ಇದು ಮಕ್ಕಳಿಗೆ ಮಾತ್ರವಲ್ಲದೆ, ಶಿಕ್ಷಕರಿಗೂ ಅನುಕೂಲವಾಗಲಿದೆ. ಆರಂಭದಲ್ಲಿ 100 ಶಾಲೆಗಳಿಗೆ ಪ್ರಾಯೋಗಿಕವಾಗಿ ಈ ನಿಘಂಟನ್ನು ವಿತರಣೆ ಮಾಡಲಾಗುತ್ತಿದೆ. ಇಲಾಖೆ ವೆಬ್‌ಸೈಟ್‌ನಲ್ಲಿಯೂ ಲಭ್ಯವಿದೆ. - ಎಚ್.ಎನ್. ಗೋಪಾಲಕೃಷ್ಣ, ಡಿಎಸ್‌ಇಆರ್‌ಟಿ ನಿರ್ದೇಶಕ