ನ್ಯೂಸ್

ಮದ್ಯದ ಅಮಲಿನಲ್ಲಿ ಮೊಸಳೆ ಹಿಡಿಯಲು ಕೆರೆಗೆ ಜಿಗಿದ ಭೂಪ: ಆಮೇಲೇನಾಯ್ತು?

ಬಾಗಲಕೋಟೆ: ಮದ್ಯಪಾನ ಮಾಡಿದ ಬಳಿಕ ಅದರ ಅಮಲಿನಲ್ಲಿ ಏನೇನೋ ಸಾಹಸ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಪ್ರಕರಣಗಳು ಹಲವಾರು ಇವೆ. ಅಂಥದ್ದೇ ಒಂದು ಪ್ರಕರಣ ರಾಜ್ಯದಲ್ಲಿ ಇನ್ನೊಂದು ನಡೆದಿದೆ.

ಬಾಗಲಕೋಟೆ ತಾಲೂಕಿನ ಮುರನಾಳ ಪುನರ್ ವಸತಿ ಕೇಂದ್ರದ ಕೆರೆಯಲ್ಲಿ ಈ ಪ್ರಕರಣ ನಡೆದಿದೆ. ಮದ್ಯಪಾನ ಮಾಡಿದ್ದ ಮೌಲಾಸಾಬ್ ವಾಲೀಕಾರ ಎಂಬಾತ ಮದ್ಯದ ಅಮಲಿನಲ್ಲಿ ದುಸ್ಸಾಹಸಕ್ಕೆ ಇಳಿದು ಎಡವಟ್ಟು ಮಾಡಿಕೊಂಡಿದ್ದಾನೆ.

ಕಳೆದ ನಾಲ್ಕೈದು ದಿನಗಳಿಂದ ಗ್ರಾಮದ ಈ ಕೆರೆಯಲ್ಲಿ ಕಂಡುಬಂದಿರುವ ಮೊಸಳೆಯನ್ನು ನೋಡಲು ಜನರು ಮುಗಿಬಿದ್ದಿದ್ದರು. ಆ ಜಾಗಕ್ಕೆ ಕಂಠಪೂರ್ತಿ ಕುಡಿದಿದ್ದ ಮೌಲಾಸಾಬ್​ ಕೂಡ ಬಂದಿದ್ದು, ಮೊಸಳೆ ಹಿಡಿಯುವುದಾಗಿ ಹೇಳಿ ಮದ್ಯದ ನಶೆಯಲ್ಲಿ ಕೆರೆಗೆ ಧುಮುಕಿದ್ದಾನೆ.

ಹೀಗೆ ಕೆರೆಯ ಮಧ್ಯಕ್ಕೆ ಹೋದ ಮೌಲಾಸಾಬ್ ಈಜಲಾಗದೆ ನೀರಿನಲ್ಲಿ ಮುಳುಗಲಾರಂಭಿಸಿದ್ದ. ಇದನ್ನು ಗಮನಿಸಿದ ಸ್ಥಳೀಯರು ಕೆರೆಗೆ ಧುಮುಕಿ ಮೌಲಾಸಾಬ್​ನನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಮದ್ಯದ ಅಮಲಿನಲ್ಲಿ ಎಡವಟ್ಟು ಮಾಡಿಕೊಂಡು ಈತ ನೆರೆದಿದ್ದ ಜನರ ಎದುರು ಮುಖಭಂಗ ಎದುರಿಸುವಂತಾಗಿತ್ತು.