ನ್ಯೂಸ್

ಹೋಳಿ ಸಂಭ್ರಮದ ವೇಳೆ ಅಪ್ಪಿಕೊಳ್ಳಲು ನಿರಾಕರಿಸಿದವನ ಮೇಲೆ ಗುಂಡು ಹಾರಿಸಿದ ಯುವಕ; ಆಘಾತಕಾರಿ ವಿಡಿಯೋ ವೈರಲ್

ಲಖನೌ: ಉತ್ತರ ಭಾರತದಲ್ಲಿ ಹೋಳಿ (Holi) ಸಂಭ್ರಮ ಮನೆ ಮಾಡಿದ್ದು, ಉತ್ತರಪ್ರದೇಶದಲ್ಲಿ ತುಸು ಜೋರಾಗಿ ಆಚರಿಸಲಾಗುತ್ತಿದೆ ಎಂದರೆ ತಪ್ಪಾಗಲಾರದು. ಹೋಳಿ ಹಬ್ಬದ ಸಂಭ್ರಮಾಚರಣೆಯ ವೇಳೆ ಕೆಲವೆಡೆ ಅಹಿತಕರೆ ಘಟನೆಗಳು ನಡೆದಿದ್ದು, ಇದೀಗ ಯುವಕನೋರ್ವ ತನ್ನನ್ನು ತಬ್ಬಿಕೊಳ್ಳಲು ನಿರಾಕರಿಸಿದರೆಂಬ ಕಾರಣಕ್ಕೆ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿರುವ ಬಗ್ಗೆ ವರದಿಯಾಗಿದೆ.

ಘಟನೆಯು ಉತ್ತರಪ್ರದೇಶದ ಮೊರಾದಾಬಾದ್​ನ ಕಟ್ಘರ್ ಎಂಬ ಪ್ರದೇಶದಲ್ಲಿ ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ಯುವಕನೋರ್ವ ತನ್ನನ್ನು ತಬ್ಬಿಕೊಳ್ಳಲು ನಿರಾಕರಿಸಿದರೆಂಬ ಕಾರಣಕ್ಕೆ ಬಿಜೆಪಿ ಬೂತ್ ಅಧ್ಯಕ್ಷ ಸಂಜಯ್ ಕುಮಾರ್ ಆರ್ಯ ಮೇಲೆ ಗುಂಡು ಹಾರಿಸಿದ್ದು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ, ಫೂಲ್ವತಿ ಕನ್ಯಾ ಇಂಟರ್ ಕಾಲೇಜಿನ ಬಳಿ ಸಂಜಯ್ ಕುಮಾರ್ ಆರ್ಯ ತನ್ನ ಸ್ನೇಹಿತರೊಂದಿಗೆ ಹೋಳಿ (Holi) ಹಬ್ಬವನ್ನು ಆಚರಿಸುತ್ತಿದ್ದಾಗ ಸ್ಥಳಕ್ಕೆ ಅಭಿಷೇಕ್ ಠಾಕೂರ್ ಎಂಬಾತ ಬಂದಿದ್ದು, ಕುಡಿದ ಮತ್ತಿನಲ್ಲಿ ತನ್ನನ್ನು ತಬ್ಬಿಕೊಳ್ಳುವಂತೆ ಸಂಜಯ್ ಕುಮಾರ್​ಗೆ ಒತ್ತಾಯಿಸಿದ್ದಾನೆ. ಈಗಾಗಲೇ ಸ್ನಾನ ಮಾಡಿರುವ ಕಾರಣ ಅಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು ಸಂಜಯ್ ಹೇಳಿದ್ದಾನೆ. 

ಇದರಿಂದ ಸಿಟ್ಟಿಗೆದ್ದ ಅಭಿಷೇಕ್​ ಸಂಜಯ್ ಕಾಲಿಗೆ ಗುಂಡು ಹಾರಿಸಿದ್ದು, ಬಳಿಕ ಪಿಸ್ತೂಲ್​ನಿಂದ ಸಂಜಯ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಆರೋಪಿಯ ಕೃತ್ಯವನ್ನು ಸ್ಥಳೀಯರೊಬ್ಬರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಾದ ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ತಿಳಿಸಿದ್ಧಾರೆ.