ನ್ಯೂಸ್

ಕುಡಿದ ಮತ್ತಿನಲ್ಲಿ ತನ್ನ ಪತ್ನಿಯೆಂದು ಪಕ್ಕದ ಮನೆಯ ಮಹಿಳೆಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ! Drunk Man

Drunk Man: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿ ಎಂದು ತಪ್ಪಾಗಿ ಭಾವಿಸಿ ಪಕ್ಕದ ಮನೆಯ ಮಹಿಳೆಯ ಮೇಲೆ ಮಾರಕ ಆಯುಧಗಳಿಂದ ಹಲ್ಲೆ ನಡೆಸಿದ ಘಟನೆ ಮೈಲಾರ್ದೇವ್ಪಲ್ಲಿಯಲ್ಲಿ ನಡೆದಿದೆ.

ಮೈಲಾರ್ದೇವಪಲ್ಲಿಯ ಉದ್ದಮ್‌ಗಡ್ಡದಲ್ಲಿ ಪತ್ನಿ ನೂರ್ಜಹಾನ್ ಜೊತೆ ಸಲೀಂ ಕೂಲಿ ಕೆಲಸ ಮಾಡುತ್ತಿದ್ದನು. ಸಲೀಂ ಮನೆಯ ಪಕ್ಕದಲ್ಲಿ ಅಬಿದಾ ಎಂಬ ಮಹಿಳೆ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಕೆಲವು ವಾರಗಳಿಂದ ಸಲೀಂ ಮತ್ತು ಆತನ ಪತ್ನಿಯ ನಡುವೆ ಜಗಳಗಳು ನಡೆಯುತ್ತಲೇ ಇರುತ್ತಿತ್ತು, ಹೀಗಾಗಿ ಆತನು ತುಂಬಾ ಕೋಪಗೊಂಡಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಶುಕ್ರವಾರ (ಮೇ.6) ರಾತ್ರಿ, ಸಲೀಂ ಕುಡಿದು ಮನೆಗೆ ಬಂದಿದ್ದನು. ಆದರೆ ಆ ದಿನ ಸಲೀಂ ತನ್ನ ಮನೆಯ ಕೋಣೆಗೆ ಹೋಗುವ ಬದಲು ಅಬಿದಾ ಮಲಗಿದ್ದ ಪಕ್ಕದ ಮನೆಯ ಕೋಣೆಗೆ ಹೋದನು. ಅಬಿದಾಳನ್ನೇ ತನ್ನ ಹೆಂಡತಿ ಎಂದು ತಪ್ಪಾಗಿ ಭಾವಿಸಿ ಹರಿತವಾದ ವಸ್ತುವಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ" ಎಂದು ಪೊಲೀಸರು ಹೇಳಿದ್ದಾರೆ.

ಹಲ್ಲೆಗೊಳಗಾದ ಮಹಿಳೆ ಕಿರುಚಾಡಿದ ನಂತರ, ನೆರೆಹೊರೆಯವರು ಬಂದು ಸಲೀಂನನ್ನು ಹಿಡಿದು ಥಳಿಸಿ, ಅಬಿದಾಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಈ ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)