Foreign Tourist Drama (ಚಿತ್ರ X)
ಹಿಮಾಚಲ ಪ್ರದೇಶ: ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣವಾದ ಧರ್ಮಶಾಲಾದಿಂದ ಅತ್ಯಂತ ಆಘಾತಕಾರಿ ಮತ್ತು ಅವ್ಯವಸ್ಥೆಯ ದೃಶ್ಯವೊಂದು ಮುನ್ನೆಲೆಗೆ ಬಂದಿದೆ. ಅತ್ಯಂತ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಪಾನಮತ್ತ ವಿದೇಶಿ ಪ್ರವಾಸಿಗನೊಬ್ಬ ಸಾರ್ವಜನಿಕವಾಗಿ ತೀವ್ರ ಹೈಡ್ರಾಮಾ ಸೃಷ್ಟಿಸಿದ್ದು, ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುವ ಮೂಲಕ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆ ಏನು?
ಧರ್ಮಶಾಲಾದ ಪ್ರಮುಖ ಕೇಂದ್ರಗಳಾದ ಕಚಹರಿ ಚೌಕ್ ಮತ್ತು ಕೊತ್ವಾಲಿ ಬಜಾರ್ ಬಳಿ ಈ ಇಡೀ ಘಟನೆ ಸಂಭವಿಸಿದೆ. ಆದಾಗ್ಯೂ, ವೈರಲ್ ಆದ ವಿಡಿಯೋದಲ್ಲಿ ಆ ವ್ಯಕ್ತಿ ಮಾರುಕಟ್ಟೆಯಲ್ಲಿದ್ದ ವ್ಯಕ್ತಿ ಹಾಗೂ ದಾರಿಹೋಕರರ ಮೇಲೆ ಕೂಗಾಡುತ್ತಾ ತರಕಾರಿಗಳನ್ನು ರಸ್ತೆಗೆ ಎಸೆದು ಸಾರ್ವಜನಿಕವಾಗಿ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವುದನ್ನು ಕಾಣಬಹುದಾಗಿದೆ.
ಇದಾದ ಬಳಿಕ ಅಲ್ಲೇ ಹತ್ತಿರ ನಿಲ್ಲಿಸಿದ್ದ ಟ್ಯಾಕ್ಸಿಯ ಮೇಲೆ ಕಲ್ಲು ತೂರಾಟ ನಡೆಸಿ, ವಾಹನವನ್ನು ಹಾಳು ಮಾಡಿದ್ದು, ಜನದಟ್ಟಣೆಯ ಮಾರುಕಟ್ಟೆಯಲ್ಲಿ ಜನರನ್ನು ಆತಂಕ್ಕೀಡು ಮಾಡಿದೆ ಎಂದು ವರದಿಯಾಗಿದೆ.
ಮಹಿಳಾ ಟ್ರಾಫಿಕ್ ಪೊಲೀಸ್ ಜೊತೆ ಅನುಚಿತ ವರ್ತನೆ!
ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ, ಮಾರುಕಟ್ಟೆಯಲ್ಲಿ ಗದ್ದಲ ತಾರಕಕ್ಕೇರಿದ್ದ ಸಮಯದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಆತನನ್ನು ಸಮಾಧಾನಪಡಿಸಲು ಸ್ಥಳದಲ್ಲಿದ್ದ ಮಹಿಳಾ ಸಂಚಾರ ಪೊಲೀಸ್ ಅಧಿಕಾರಿ ಮುಂದಾಗಿದ್ದಾರೆ. ಆದರೆ, ಆ ಕುಡಿದ ಮತ್ತಿನಲ್ಲಿದ್ದ ವಿದೇಶಿ ಪ್ರವಾಸಿಗ ಆಕೆಯೊಂದಿಗೂ ಅತ್ಯಂತ ಅನುಚಿತ ಹಾಗೂ ಅಸಭ್ಯವಾಗಿ ವರ್ತಿಸಿದ್ದಾನೆ.
ಸ್ಥಳೀಯ ನಿವಾಸಿಗಳು ಮತ್ತು ಅಂಗಡಿಯವರು ಆತನ ಉನ್ಮಾದದ ವರ್ತನೆಯನ್ನು ತಡೆಯಲು ಮತ್ತು ಇಡೀ ಪರಿಸ್ಥಿತಿಯನ್ನು ಹತೋಟಿಗೆ ತರಲು ತೀವ್ರವಾಗಿ ಪ್ರಯತ್ನಪಟ್ಟಿದ್ದಾರೆ. ಇದಾದ ಬಳಿಕ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ASP) ಬೀರ್ ಬಹದ್ದೂರ್ ಸಿಂಗ್ ಆತನನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಇಂಟರ್ನೆಟ್ ಪ್ರತಿಕ್ರಿಯೆ
ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಭಾರತದಲ್ಲಿ ಪ್ರವಾಸಿಗರ ನಡವಳಿಕೆಯನ್ನು ಚರ್ಚಿಸುತ್ತಿದ್ದಾರೆ. ಒಬ್ಬ ಬಳಕೆದಾರರು ಒಬ್ಬ ಭಾರತೀಯ ಪ್ರವಾಸಿಗ ವಿದೇಶದಲ್ಲಿ ಈ ರೀತಿ ಮಾಡಿದರೆ, ಎಲ್ಲೆಡೆ ಆಕ್ರೋಶ ಕೇಳಿಬರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರ ವಿದೇಶಗಳಲ್ಲಿ ಭಾರತೀಯ ಪ್ರವಾಸಿಗರನ್ನು ಒಳಗೊಂಡ ಘಟನೆಗಳು ಆನ್‌ಲೈನ್‌ನಲ್ಲಿ ಭಾರಿ ಟೀಕೆಗೆ ಕಾರಣವಾಗುವುದನ್ನು ಎತ್ತಿ ತೋರಿಸಿದ್ದಾರೆ (ಏಜೆನ್ಸೀಸ್).