ಬೆಂಗಳೂರು: ಮದ್ಯದ ಅಮಲಿನಲ್ಲಿದ್ದ ಚಾಲಕ ಅತಿವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ವಾಕಿಂಗ್ ಮಾಡುತ್ತಿದ್ದ ವೃದ್ಧ ಮಹಿಳೆ ಹಾಗೂ ಆಕೆಯ ಮೊಮ್ಮಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಭಾನುವಾರ ಬೆಳಿಗ್ಗೆ ಕಲ್ಯಾಣ ನಗರದ ಚಳ್ಳಿಕೆರೆಯಲ್ಲಿ ನಡೆದಿದೆ.
ಘಟನೆಯಲ್ಲಿ ಶೈಲಾ (೬೦) ಗಂಭೀರವಾಗಿ ಗಾಯಗೊಂಡಿದ್ದು, ಅವರ ಮೊಮ್ಮಗಳಿಗೆ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಭಾನುವಾರ ಬೆಳಗ್ಗೆ ೮ ಗಂಟೆಯ ಸಮಯದಲ್ಲಿ ಶೈಲಾ ಮತ್ತು ಅವರ ಮೊಮ್ಮಗಳು ಮನೆಯ ಬಳಿ ವಾಕಿಂಗ್ ಮಾಡುತ್ತಿದ್ದಾಗ ಈ ವೇಳೆ ಅತಿವೇಗವಾಗಿ ಮಾರುತಿ ವ್ಯಾನ್ ಚಲಾಯಿಸಿಕೊಂಡು ಬಂದ ಚಾಲಕ ಡಿಕ್ಕಿಯಾಗಿಸಿದ್ದಾನೆ. ನಂತರ ಕಾರು ರಸ್ತೆ ಬದಿ ನಿಂತಿದ್ದ ದ್ವಿಚಕ್ರ ವಾಹನ ಕಾಂಪೌಂಡಿಗೆ ಡಿಕ್ಕಿಯಾಗಿದೆ. ಗಾಯಾಳು ಶೈಲಾ ಅವರ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು ಸಮೀಪದ ಆಸ್ಪತ್ರೆಯ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಹೆಣ್ಣೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆರೋಪಿ ಬಂಧನ, ಬಿಡುಗಡೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಹೆಣ್ಣೂರು ಸಂಚಾರ ಪೊಲೀಸರು ಬಂಧಿಸಿ ಬಳಿಕ ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.
ಚಳ್ಳಿಕೆರೆ ನಿವಾಸಿ ಕುಮಾರ್(29) ಬಂಧಿತ ಆರೋಪಿ. ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್‌ಗೆ ಮಾಲೀಕರು ದೀಪಾವಳಿ ಬೌನಸ್ ನೀಡಿದ್ದರು. ಆ ಹಣದಲ್ಲಿ ರಾತ್ರಿ ಕಂಠ ಪೂರ್ತಿ ಕುಡಿದ್ದ ಆರೋಪಿಯು ಬೆಳಗ್ಗೆ ಮದ್ಯದ ನಶೆಯಲ್ಲಿಯೇ ಕಾರು ಚಲಾಯಿಸಿದ್ದಾನೆ. ಈ ವೇಳೆ ಕಾರು ತನ್ನ ನಿಯಂತ್ರಣಕ್ಕೆ ಸಿಗದೆ ಅಜ್ಜಿಗೆ ಡಿಕ್ಕಿ ಹೊಡೆದು ನಂತರ ರಸ್ತೆ ಬದಿ ನಿಂತಿದ್ದ ಕಾರು-ದ್ವಿಚಕ್ರ ವಾಹನ ಬಳಿಕ ಕಾಂಪೌಂಡಿಗೆ ಡಿಕ್ಕಿ ಹೊಡೆದು ನಿಂತಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಹೆಣ್ಣೂರು ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.