ಬೆಂಗಳೂರು: ಗೆಳೆಯರ ಜತೆ ಪಾರ್ಟಿ ಮಾಡಲು ಬಂದಿದ್ದ ಆಟೋ ಚಾಲಕ ಕೊಲೆಯಾಗಿರುವ ಪ್ರಕರಣ ಉಪ್ಪಾರಪೇಟೆಯಲ್ಲಿ ಬುಧವಾರ ರಾತ್ರಿ ನಡೆದಿದೆ
ಮೂಲತಃ ತುಮಕೂರು ಜಿಲ್ಲೆ ಹುಲಿಯೂರು ದುರ್ಗದ ಸುರೇಶ್(೪೦) ಕೊಲೆಯಾದ ಆಟೋ ಚಾಲಕ. ಹಲವಾರು ವರ್ಷಗಳಿಂದ ಸುರೇಶ್ ಹುಲಿಯೂರು ದುರ್ಗದಿಂದ ಬೆಂಗಳೂರಿಗೆ ಬಂದು ಆಟೋ ಚಾಲಕ ವೃತ್ತಿ ಮಾಡಿಕೊಂಡು ಜೀವನ ನಡೆಸುತ್ತಿದ್ದ. ರಾತ್ರಿ ವೇಳೆ ಎಲ್ಲೆಂದರಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಕೆಲವೊಮ್ಮೆ ಕುಡಿದು ುಟ್‌ಪಾತ್ ಮೇಲೆ ಮಲಗಿಕೊಳ್ಳುತ್ತಿದ್ದರು.
ಬುಧವಾರ ರಾತ್ರಿ ಸುರೇಶ್ ಬಳೆಪೇಟೆಗೆ ಬಂದಿದ್ದರು. ಆ ವೇಳೆ ಸ್ನೇಹಿತರ ಜತೆ ಶ್ರೀನಿವಾಸ ಮಾರ್ಗದ ರಸ್ತೆಯ ಬಳಿ ಮಧ್ಯರಾತ್ರಿವರೆಗೂ ಪಾರ್ಟಿ ಮಾಡಿದ್ದಾರೆ. ಪಾರ್ಟಿ ವೇಳೆ ಯಾವುದೋ ವಿಚಾರವಾಗಿ ಜಗಳವಾಗಿದ್ದು, ಕೋಪದಲ್ಲಿ ಸುರೇಶ್ ಮೇಲೆ ಕೈಗಳಿಂದ ಹಲ್ಲೆ ನಡೆಸಿ ಕಾಲಿನಿಂದ ಒದ್ದು ಕೊಲೆ ಮಾಡಿ ಜತೆಯಲ್ಲಿದ್ದವರು ಪರಾರಿಯಾಗಿದ್ದಾರೆ. ಬೆಳಗ್ಗೆ ೮ ಗಂಟೆ ಸುಮಾರಿನಲ್ಲಿ ಸಾರ್ವಜನಿಕರು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರ ಪರಿಶೀಲನೆ ನಡೆಸಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ದುಷ್ಕರ್ಮಿಗಳ ಪತ್ತೆಗೆ ಬಲೆಬೀಸಿದ್ದಾರೆ.
ಯಾವ ವಿಚಾರಕ್ಕೆ ಕೊಲೆ ನಡೆದಿದೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಸ್ನೇಹಿತರೇ ಸುರೇಶ್ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಾರ್‌ಪೇಟೆ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.