ನ್ಯೂಸ್

ಕೊಲಂಬೊದಿಂದ ಮುಂಬೈಗೆ ಬಂದ ಮಹಿಳೆಯಿಂದ 47 ಕೋಟಿ ರೂ. ಮೌಲ್ಯದ ಡ್ರಗ್ಸ್​ ವಶ; ಐವರ ಬಂಧನ| Drugs Seized

ಮುಂಬೈ: ಕೊಲಂಬೊದಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆಯೊಬ್ಬರಿಂದ ಸುಮಾರು 47 ಕೋಟಿ ರೂ. ಮೌಲ್ಯದ 4.7 ಕೆಜಿ ಡ್ರಗ್ಸ್(Drugs Seized)​ ಅನ್ನು ಡಿಆರ್​ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಐವರನ್ನು ಬಂಧಿಸಿದ್ದಾರೆ ಎಂದು ಶನಿವಾರ(ನ. 01) ವರದಿಯಾಗಿದೆ.

ವಿಮಾನದಿಂದ ಇಳಿದು ಟರ್ಮಿನಲ್ ಕಡೆ ಬಂದ ಮಹಿಳೆಯನ್ನು ಡಿಆರ್​ಐ ಅಧಿಕಾರಿಗಳು ತಪಾಸಣೆ ಮಾಡುವಾಗ ಅನುಮಾನ ಬಂದು ವಿವರವಾದ ತಪಾಸಣೆಗೆ ಒಳಪಡಿಸಿದಾಗ ಕಾಫಿ ಪ್ಯಾಕೆಟ್‌ಗಳ ಒಳಗೆ ಮರೆಮಾಡಲಾಗಿರುವ ಬಿಳಿ ಪುಡಿಯ ವಸ್ತುವಿನ ಒಂಬತ್ತು ಚೀಲಗಳು ಪತ್ತೆಯಾಗಿವೆ. NDPS ಫೀಲ್ಡ್ ಕಿಟ್‌ನ ಪ್ರಾಥಮಿಕ ಪರೀಕ್ಷೆಯು ಆ ವಸ್ತುವು ಕೊಕೇನ್ ಎಂದು ದೃಢಪಡಿಸಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಹಣಕಾಸು ಸಚಿವಾಲಯ, ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಬೇಧಿಸಲಾಗಿದ್ದು, ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (CSMIA) ಕೊಲಂಬೊದಿಂದ ಆಗಮಿಸಿದ ಮಹಿಳಾ ಪ್ರಯಾಣಿಕರೊಬ್ಬರಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 47 ಕೋಟಿ ರೂ. ಮೌಲ್ಯದ 4.7 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಂಡಿದೆ ಎಂದು ತಿಳಿಸಿದೆ.

ಡಿಆರ್​ಐ ಮಹಿಳೆ ಜೊತೆ ಜಾಲದ ಇತರೆ ನಾಲ್ವರು ಆರೋಪಿಗಳನ್ನು ಬಂಧಿಸಿದೆ. ಡ್ರಗ್ಸ್​ ಸ್ವೀಕರಿಸಲು ನಿಲ್ದಾಣಕ್ಕೆ ಬಂದಿದ್ದ ಓರ್ವ ಸೇರಿ ಪ್ರಕರಣಕ್ಕೆ ಸಂಬಂಧಿಸಿದ್ದ ನಾಲ್ವರನ್ನು ಬಂಧಿಸಿದೆ. ಎಲ್ಲಾ ಐದು ಆರೋಪಿಗಳನ್ನು ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ (NDPS) ಕಾಯ್ದೆ, 1985ರ ನಿಬಂಧನೆಗಳ ಅಡಿಯಲ್ಲಿ ಬಂಧಿಸಿದ್ದಾರೆ. (ಏಜೆನ್ಸೀಸ್)