ನ್ಯೂಸ್

ಗ್ರಾಹಕರ ಸೋಗಿನಲ್ಲಿ ಪೆಡ್ಲರ್‌ಗೆ ಖೆಡ್ಡಾ, ವಿಶ್ವೇಶ್ವರಪುರ ಪೊಲೀಸರಿಂದ 2 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಬೆಂಗಳೂರು : ಗ್ರಾಹಕರ ಸೋಗಿನಲ್ಲಿ ನೈಜೀರಿಯಾದ ಡ್ರಗ್ಸ್ ಪೆಡ್ಲರ್‌ಗೆ ಖೆಡ್ಡಾ ತೋಡಿದ ವಿಶ್ವೇಶ್ವರಪುರ ಪೊಲೀಸರು ಆರೋಪಿಯನ್ನು ಬಂಧಿಸಿ ಕೋಟ್ಯಂತರ ರೂ. ಮೌಲ್ಯದ ಮಾದಕ ದ್ರವ್ಯ ಜಪ್ತಿ ಮಾಡಿದ್ದಾರೆ.

ಆರ್.ಟಿ.ನಗರ ನಿವಾಸಿ ಜಾನ್ (30) ಬಂಧಿತ ಪೆಡ್ಲರ್. ಆರೋಪಿಯಿಂದ 2 ಕೋಟಿ ರೂ.ಮೌಲ್ಯದ 1 ಕೆಜಿ 20 ಗ್ರಾಂ ಎಂಡಿಎಂಎ ಮಾದಕ ವಸ್ತು ಮತ್ತು ಕೃತ್ಯಕ್ಕೆ ಬಳಸುತ್ತಿದ್ದ 1 ಬೈಕ್, ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

3 ವರ್ಷದ ಹಿಂದೆ ಆರೋಪಿ ಜಾನ್, ಬಿಜಿನೆಸ್ ವೀಸಾ ಪಡೆದು ನಗರಕ್ಕೆ ಬಂದಿದ್ದ. ವೀಸಾ ಅವಧಿ ಮುಗಿದು 1 ವರ್ಷ ಕಳೆದರೂ ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದ. ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ.

ಗೋವಾದಿಂದ ಪರಿಚಿತ ಡ್ರಗ್ಸ್ ಪೆಡ್ಲರ್‌ಗಳ ಮುಖಾಂತರ ಕಡಿಮೆ ಬೆಲೆಗೆ ಎಂಡಿಎಂಎ ಡ್ರಗ್ಸ್ ಖರೀದಿಸಿ ನಗರಕ್ಕೆ ತಂದು ಪಾರ್ಟಿ, ಮೋಜು-ಮಸ್ತಿ ಕೂಟಗಳಿಗೆ, ಟೆಕ್ಕಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ. ಆರೋಪಿಯ ಬಂಧನದ ಬಳಿಕ ಆತನ ಬಾಡಿಗೆ ಮನೆ ಮೇಲೆ ದಾಳಿ ನಡೆಸಲಾಯಿತು.

ಮನೆಯಲ್ಲಿದ್ದ ನೈಜೀರಿಯಾದ ಮತ್ತೊಬ್ಬ ಪೆಡ್ಲರ್, ಎಂಡಿಎಂಎ ಮತ್ತು ಮಾದಕ ವಸ್ತುವನ್ನು ಶೌಚಗೃಹಕ್ಕೆ ಎಸೆದು ಕಿಟಕಿ ಮೂಲಕ ಹೊರಗೆ ಬಂದು ಸ್ಯಾನಿಟರಿ ಪೈಪ್ ಹಿಡಿದು 2ನೇ ಮಹಡಿಯಿಂದ ಕೆಳಗೆ ಇಳಿದು ಪರಾರಿಯಾಗಿದ್ದಾನೆ.

ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ವಿಶ್ವೇಶ್ವರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.