ನ್ಯೂಸ್

Drugs Mafia: ದೆಹಲಿ ಪೊಲೀಸರ ಭರ್ಜರಿ ಬೇಟೆ; ಬರೋಬ್ಬರಿ 2000 ಕೋಟಿ ಮೌಲ್ಯದ ಕೊಕೇನ್ ವಶ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಅತಿ ದೊಡ್ಡ ಮಾದಕ ವಸ್ತು ದಂಧೆ ಬಯಲಾಗಿದ್ದು, 2,000 ಕೋಟಿ ರೂ. ಮೌಲ್ಯದ 500 ಕೆಜಿ ಕೊಕೇನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ದೆಹಲಿಯಲ್ಲಿ ದಾಳಿ ನಡೆಸಿದ್ದು, ಮಾದಕ ವಸ್ತು ದಂಧೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಅಂತಾರಾಷ್ಟ್ರೀಯ ಡ್ರಗ್ಸ್ ಸ್ಮಗ್ಲಿಂಗ್ ಸಿಂಡಿಕೇಟ್ ಈ ಬೃಹತ್ ಕೊಕೇನ್ ರವಾನೆಯ ಹಿಂದೆ ಇದೆ. ದೆಹಲಿಯ ತಿಲಕ್ ನಗರ ಪ್ರದೇಶದಲ್ಲಿ ಭಾನುವಾರ 400 ಗ್ರಾಂ ಹೆರಾಯಿನ್ ಮತ್ತು 160 ಗ್ರಾಂ ಕೊಕೇನ್ ವಶಪಡಿಸಿಕೊಂಡ ಇಬ್ಬರು ಅಫ್ಘಾನಿಸ್ತಾನ ಪ್ರಜೆಗಳನ್ನು ಬಂಧಿಸಿದ ನಂತರ ಇಂದು ಬೃಹತ್​ ದಾಳಿ ನಡೆಸಿದೆ.

ಅದೇ ದಿನ ದೆಹಲಿಯ ಕಸ್ಟಮ್ಸ್ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರಿಂದ 24 ಕೋಟಿ ರೂ. ಮೌಲ್ಯದ 1,660 ಗ್ರಾಂ ಕೊಕೇನ್ ಅನ್ನು ವಶಪಡಿಸಿಕೊಂಡಿದೆ.

ಪ್ರಯಾಣಿಕನು ಫೆಡರಲ್ ರಿಪಬ್ಲಿಕ್ ಆಫ್ ಲೈಬೀರಿಯಾದ ಪ್ರಜೆಯಾಗಿದ್ದು, ಅವರು ದುಬೈನಿಂದ ದೆಹಲಿಗೆ ಆಗಮಿಸಿದ್ದಾರೆ. ಅವರನ್ನು ಎನ್‌ಡಿಪಿಎಸ್ ಕಾಯ್ದೆ 1985 ರ ಅಡಿಯಲ್ಲಿ ಬಂಧಿಸಲಾಯಿತು. ಹೆಚ್ಚಿನ ತನಿಖೆ ನಡೆಯುತ್ತಿದೆ.