ನ್ಯೂಸ್

ಡ್ರಗ್ ಫ್ರೀ ಕರ್ನಾಟಕ ಆ್ಯಪ್

ಬೆಂಗಳೂರು: ಮಾದಕ ದ್ರವ್ಯ ಸಾಗಾಟ, ಮಾರಾಟ ಮತ್ತು ಸೇವನೆಯನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಪೊಲೀಸ್ ಇಲಾಖೆ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿ ಸಾರ್ವಜನಿಕರ ಸಹಕಾರ ಕೋರಿದೆ.

ಆ್ಯಪ್‌ನಲ್ಲಿ ಸಾರ್ವಜನಿಕರು ಮಾದಕ ಬೆಳೆಯನ್ನು ಬೆಳೆಯುತ್ತಿರುವ ಬೆಳೆಗಾರರು, ಮಾರಾಟಗಾರರ, ಗ್ರಾಹಕರು, ಸಿಂಥೆಟಿಕ್ ಡ್ರಗ್ಸ್‌ಗಳನ್ನು ತಯಾರಿಸುತ್ತಿರುವ ಲ್ಯಾಬ್‌ಗಳು, ಸಂಗ್ರಹಣೆ ಗೋದಾಮು, ಸಾರಿಗೆ ವ್ಯವಸ್ಥೆ, ಇತ್ಯಾದಿ ಯಾವುದೇ ಮಾಹಿತಿ ಲಭ್ಯವಾದರೇ ಕೂಡಲೇ ಈ ಆ್ಯಪ್‌ನಲ್ಲಿ ದೂರು ಸಲ್ಲಿಸಬಹುದು. ಮಾಹಿತಿ ಕೊಟ್ಟವರ ಹೆಸರು, ವಿಳಾಸವನ್ನು ಗೌಪ್ಯವಾಗಿ ಕಾಪಾಡಿಕೊಳ್ಳಲಾಗುತ್ತದೆ ಎಂದು ರಾಜ್ಯ ಪೊಲೀಸ್ ಇಲಾಖೆ ಭರವಸೆ ನೀಡಿದೆ.

ಸಾರ್ವಜನಿಕರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ‘ಡ್ರಗ್ ಫ್ರೀ ಕರ್ನಾಟಕ’ ಆ್ಯಪ್‌ನ್ನು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬುದು. ಮಾದಕ ವಸ್ತುವಿನ ಕುರಿತಾಗಿ ಇಂಗ್ಲೀಷ್ ಅಥವಾ ಕನ್ನಡದಲ್ಲಿ ವರದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಈ ಮಾಹಿತಿಯನ್ನು ಸ್ಥಳೀಯ ಪೊಲೀಸರು, ಘಟಕಾಧಿಕಾರಿಗಳಾದ ಡಿಸಿಪಿ/ಎಸ್‌ಪಿ ಹಾಗೂ ಉಸ್ತುವಾರಿ ಮೇಲಾಧಿಕಾರಿಗಳಿಗೆ ಹಂಚಿಕೊಳ್ಳಲಾಗುತ್ತದೆ. ಮಾಹಿತಿ ಪಡೆದ ಅಧಿಕಾರಿಯು ನೈಜತೆ ಖಾತ್ರಿಪಡಿಸಿಕೊಂಡು ದಾಳಿ ಮಾಡಲು ಅನುವು ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.