ದಾವಣಗೆರೆ: ಯಕೃತ್ (ಲಿವರ್) ಕಸಿಗೆ ಒಳಗಾದ ಹೊನ್ನಾಳಿಯ ಬಡ ಕುಟುಂಬದ 15 ವರ್ಷದ ಬಾಲಕಿಗೆ ಕರೋನಾ ಲಾಕ್ ಡೌನ್ ನಂಥ ಕಷ್ಟ ಕಾಲದಲ್ಲೂ ಅಗತ್ಯ ಔಷಧಗಳ ನೆರವು ಹರಿದು ಬಂದಿದೆ.
ಬಾಲಕಿ ದೀಪಿಕಾಗೆ ಯಕೃತ್ ಹಾನಿಯಾಗಿತ್ತು. ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಆಕೆಗೆ ತಂದೆಯೆ ಲಿವರ್ ನೀಡಿದ್ದರು. ಯಕೃತ್ ಕಸಿಗೆ 24 ಲಕ್ಷ ರೂ. ಖರ್ಚಾಗಿದ್ದು, ಸಂಪೂರ್ಣ ಹಣವನ್ನು ದಾನಿಗಳು ನೀಡಿದ್ದರು. ಬಾಲಕಿಯ ತಂದೆ ಮಹಾವೀರ್ ಬಸ್ ಏಜೆಂಟ್ ಆಗಿದ್ದು ಇವರದು ಆರ್ಥಿಕವಾಗಿ ಹಿಂದುಳಿದ ಕುಟುಂಬವಾಗಿದೆ. ಲಾಕ್‌ಡೌನ್‌ನಿಂದ ದುಡಿಮೆ ಇಲ್ಲದೆ ಮಗಳ ಔಷಧಕ್ಕೆ ಹಣ ಹೊಂದಿಸುವುದು ಕಷ್ಟವಾಗಿತ್ತು.
ಇಂಥ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಈ ಕುಟುಂಬಕ್ಕೆ ಉಚಿತವಾಗಿ ಔಷಧ ನೀಡುವ ವ್ಯವಸ್ಥೆ ಮಾಡಿದ್ದಾರೆ. ವಿಜಯೇಂದ್ರ ಅವರ ತಂಡದ ಸದಸ್ಯ, ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಶ್ರೀನಿವಾಸ್ ಭಟ್ ಈ ಕಾರ್ಯಕ್ಕೆ ಕೈಜೋಡಿಸಿದರು. ಬಾಲಕಿಗೆ ಬೇಕಾಗಿದ್ದ ಔಷಧಗಳನ್ನು ಬೆಂಗಳೂರಿನಿಂದ ತರಿಸಲಾಯಿತು. ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಂಗಳವಾರ ಆ ಔಷಧಗಳನ್ನು ವಿತರಿಸಿದರು.