ಹಲಗೂರಿನ ಜೆಪಿಎಂ ಕಾಲೇಜಿನ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಗುರುವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ರಮೇಶ್, ಎ.ಟಿ.ಶ್ರೀನಿವಾಸ್, ಮೀನಾಕ್ಷಿ, ಗಿರೀಶ್, ಜಯಂತಿ, ಲಕ್ಷ್ಮೀ ಇತರರಿದ್ದರು. 
ನ್ಯೂಸ್

ಮಾದಕ ಪದಾರ್ಥಗಳ ಸೇವನೆ ಜೀವನ ನಾಶಕ್ಕೆ ದಾರಿ

ಹಲಗೂರು: ಮಾದಕ ವಸ್ತುಗಳನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯ ಹಗೆಡುವುದರ ಜತೆಗೆ ನಮ್ಮ ಜೀವನವೇ ನಾಶವಾಗುತ್ತದೆ ಎಂಬುದನ್ನು ಮೊದಲು ಅರಿತುಕೊಂಡು ಅದನ್ನು ಸೇವಿಸದೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಹಲಗೂರು ಪೊಲೀಸ್ ಠಾಣೆ ಎಎಸ್‌ಐ ರಮೇಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜೆಪಿಎಂ ಕಾಲೇಜಿನ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಗುರುವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಸಂಘದ ವತಿಯಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮದ ಉದ್ದೇಶವನ್ನು ವಿದ್ಯಾರ್ಥಿಗಳು ಅರಿತು ನಡೆಯಬೇಕು. ನಿಮ್ಮ ತಂದೆ ತಾಯಂದಿರು ನಿಮಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಉತ್ತಮ ಪ್ರಜೆ ಮಾಡುವುದರ ಜೀವನ ರೂಪಿಸಿಕೊಳ್ಳಲು ನೆರವಾಗುತ್ತಾರೆ. ಮಕ್ಕಳ ಮೇಲೆ ಆಸೆಗಳನ್ನು ಇಟ್ಟುಕೊಂಡು ನಿಮ್ಮನ್ನು ಕಾಲೇಜಿಗೆ ಕಳಿಸುತ್ತಾರೆ. ನೀವು ಅವರ ಆಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುಂದಾಗಬೇಕು. ಯಾವುದೇ ದುಶ್ಚಟಗಳಿಗೆ ಒಳಗಾಗದೆ ನಿಮ್ಮ ಆರೋಗ್ಯ ದೃಷ್ಟಿಯಿಂದ ಇಂತಹ ಮಾದಕ ವಸ್ತುಗಳನ್ನು ಸೇವಿಸಬೇಡಿ. ಬೇರೆಯವರು ಸೇವಿಸುತ್ತಿದ್ದರೆ ಅವರಿಗೆ ನೀವು ತಿಳಿಸಿ ಅದನ್ನು ಬಿಡಿಸುವ ನಿಟ್ಟಿನಲ್ಲಿ ಮುಂದಾಗಿ ಎಂದರು.

ಜಿಲ್ಲಾ ಜಾಗೃತಿ ವೇದಿಕೆ ಸದಸ್ಯ ಎ.ಟಿ.ಶ್ರೀನಿವಾಸ್ ಮಾತನಾಡಿ, ಮಾದಕ ವಸ್ತು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ನಿಮ್ಮ ತಂದೆ-ತಾಯಂದಿರು ನಿಮ್ಮನ್ನು ಸಮಾಜದಲ್ಲಿ ಉತ್ತಮ ಪ್ರಜೆ ಆಗಬೇಕು ಎಂಬ ದೃಷ್ಟಿಯನ್ನು ಇಟ್ಟುಕೊಂಡು ಶಾಲಾ-ಕಾಲೇಜಿಗೆ ಕಳಿಸುತ್ತಾರೆ. ನೀವು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ವ್ಯಾಸಂಗ ಮಾಡಿ ಸಮಾಜದಲ್ಲಿ ಸತ್ಪ್ರಜೆಯಾಗಿ ಎಂದರು.

ಜೆಪಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೀನಾಕ್ಷಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಹಲಗೂರು ವಲಯದ ಮೇಲ್ವಿಚಾರಕ ಗಿರೀಶ್, ಜೆಪಿಎಂ ಕಾಲೇಜಿನ ಕನ್ನಡ ಉಪನ್ಯಾಸಕಕಿ ಜಯಂತಿ, ಸೇವಾ ಪ್ರತಿನಿಧಿ ಲಕ್ಷ್ಮೀ ಸೇರಿದಂತೆ ಇತರರು ಇದ್ದರು.