ನ್ಯೂಸ್

ಬರ ಪರಿಹಾರ; ಕೇಂದ್ರಕ್ಕೆ 5 ಸಾವಿರ ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ

ಬೆಂಗಳೂರು: ರಾಜ್ಯದಲ್ಲಿ 195 ತಾಲೂಕುಗಳನ್ನು ಬರಪೀಡಿತ ಎಂದು ೋಷಿಸಲಾಗಿದ್ದು, 5 ಸಾವಿರ ಕೋಟಿ ರೂ. ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ವಾರದ ಒಳಗಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ವರ್ಷ ರಾಜ್ಯಾದ್ಯಂತ ತೀವ್ರ ಮಳೆ ಕೊರತೆಯುಂಟಾಗಿದೆ. 40 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದ್ದರೆ, 2 ಲಕ್ಷ ಹೆ.ನಷ್ಟು ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ ಎಂದರು.

ಮೇವಿಗೂ, ಕುಡಿಯುವ ನೀರಿಗೂ ಪ್ರತ್ಯೇಕ ಪರಿಹಾರದ ಅವಕಾಶವಿದ್ದು, ಮುಂದಿನ ಮೂರು ದಿನದಲ್ಲಿ ಈ ಎಲ್ಲವನ್ನೂ ಒಳಗೊಂಡಂತೆ ಸಂಪೂರ್ಣ ವರದಿ ತಯಾರಿಸಲಾಗುವುದು. ಎನ್‌ಡಿಆರ್‌ಎ್ ನಿಯಮಗಳನ್ವಯ ಒಟ್ಟಾರೆ 5 ರಿಂದ 6 ಸಾವಿರ ಕೋಟಿ ರೂ. ಪರಿಹಾರ ಪಡೆಯಲು ಅವಕಾಶವಿದೆ. ಕೇಂದ್ರಕ್ಕೆ ಮನವಿ ಸಲ್ಲಿಸಿದ ಕೂಡಲೇ ಕೇಂದ್ರದ ಅಧಿಕಾರಿಗಳೂ ರಾಜ್ಯಕ್ಕೆ ಬಂದು ಪರಿಶೀಲಿಸುವ ಭರವಸೆ ನೀಡಿದ್ದಾರೆ. ಹಾಗಾಗಿ ಈ ವಾರಾಂತ್ಯದೊಳಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

ಕೇಂದ್ರದ ಬರ ಮಾರ್ಗಸೂಚಿ ಅನ್ವಯ ರಾಜ್ಯದ 161 ತಾಲೂಕುಗಳಲ್ಲಿ ತೀವ್ರ ಬರ ಎದುರಾಗಿದೆ. 34 ತಾಲೂಕುಗಳಲ್ಲಿ ಸಾಧಾರಣ ಬರದ ಸ್ಥಿತಿ ಇದೆ. ಉಳಿದಂತೆ ಇನ್ನೂ 41 ತಾಲೂಕುಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಆದರೆ ಕೇಂದ್ರದ ಮಾರ್ಗಸೂಚಿಯಂತೆ ಈ ತಾಲೂಕುಗಳಲ್ಲಿ ಬರ ಘೋಷಣೆ ಸಾಧ್ಯವಿಲ್ಲ. ಆದ್ದರಿಂದ ಅಕ್ಟೋಬರ್ ಕೊನೆಯವರೆಗೆ ಬೆಳೆ ಸಮೀಕ್ಷೆ ನಡೆಸಿ, ಬರ ಘೋಷಣೆಗೆ ಅವಕಾಶ ಇದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಹೆಚ್ಚು ಮುನ್ನೆಚ್ಚರಿಕೆ ಕ್ರಮ

ಪಶ್ಚಿಮ ಬಂಗಾಲ, ಬಿಹಾರ, ಆಸ್ಸಾಂ, ಕೇರಳ, ಜಾರ್ಖಂಡ್, ಮಣಿಪುರ, ಮಿಜೋರಾಂ ಮುಂತಾದ ರಾಜ್ಯಗಳಲ್ಲೂ ಈ ವರ್ಷ ತೀವ್ರ ಮಳೆ ಕೊರತೆ ಎದುರಾಗಿದೆ. ಆದರೆ ಈ ಯಾವ ರಾಜ್ಯಗಳೂ ಈವರೆಗೆ ಬರ ಘೋಷಣೆ ಮಾಡಿಲ್ಲ. ಕರ್ನಾಟಕ ಮಾತ್ರ ಮುಂಜಾಗ್ರತಾ ಕ್ರಮವಾಗಿ ಬರ ಘೋಷಿಸಿದೆ. ಜೂನ್ ತಿಂಗಳಿಂದಲೂ ರಾಜ್ಯದ ಮಳೆ ವರದಿಯನ್ನು ಪ್ರತಿ ವಾರ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಪಿಡಿ ಖಾತೆಯಲ್ಲಿ 462 ಕೋಟಿ ರೂ.

ರಾಜ್ಯದಲ್ಲಿ ಸದ್ಯಕ್ಕೆ ಕುಡಿಯುವ ನೀರಿಗೆ ತತ್ವಾರವಿಲ್ಲ. ಜಿ.ಪಂ. ಸಿಇಒಗಳ ಖಾತೆಗೆ ಕುಡಿಯುವ ನೀರಿಗೆಂದೇ ಈಗಾಗಲೇ 1 ಕೋಟಿ ರೂ. ವರ್ಗಾಯಿಸಲಾಗಿದೆ. ಅಲ್ಲದೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 462 ಕೋಟಿ ರೂ.ಇದೆ. ಈ ಹಣವನ್ನು ಕುಡಿಯುವ ನೀರು ಪೂರೈಕೆಗೆ ಬಳಸಲು ಸೂಚಿಸಲಾಗಿದೆ. ಮತ್ತಷ್ಟು ಹಣದ ಅಗತ್ಯವಿದ್ದರೆ ಅದನ್ನೂ ಪೂರೈಸುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಅಗತ್ಯವಿದ್ದ ಸ್ಥಳಗಳಿಗೆ ಟ್ಯಾಂಕರ್ ಅಥವಾ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆಗೆ ಮುಂದಾಗುವಂತೆ ಡಿಸಿಗಳಿಗೆ ಸೂಚಿಸಲಾಗಿದೆ.

13 ಗ್ರಾಮ, 60 ವಾರ್ಡ್‌ನಲ್ಲಿ ನೀರಿನ ಸಮಸ್ಯೆ

13 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ನಗರ ಪ್ರದೇಶದಲ್ಲಿ 60 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇದ್ದು, ಅಲ್ಲೂ ಕೂಡ ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗುತ್ತಿದೆ. ಕುಡಿಯುವ ನೀರಿಗೆ ಈಗ ಅಷ್ಟು ಸಮಸ್ಯೆ ಇಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.