ಉಪಮುಖ್ಯಮಂತ್ರಿ ಜಿ. ಪರಮೇಶ್ವರ್  
ನ್ಯೂಸ್

ಬರ ಪರಿಹಾರ ಭಿಕ್ಷೆಯಲ್ಲ, ಅದು ರಾಜ್ಯದ ಹಣ

ಬರ ಪರಿಹಾರ ಕೋರಿ ನಾನು ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರ

ಬೆಂಗಳೂರು: ಬರ ಪರಿಹಾರ ಕೋರಿ ನಾನು ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರಕ್ಕೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಬಳಸಿರುವ ಪದಗಳು ಅಸಹ್ಯ ಹುಟ್ಟಿಸುವಂತಿವೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ ಕಿಡಿಕಾರಿದ್ದಾರೆ.

ಭಾರತವು ರಾಜ್ಯಗಳ ಒಕ್ಕೂಟ. ಇಲ್ಲಿ ಕೇಂದ್ರ ಸರ್ಕಾರ ಯಜಮಾನ ಅಲ್ಲ. ರಾಜ್ಯಗಳು ಕೇಂದ್ರದ ಮುಂದೆ ಕೈಚಾಚಿ ನಿಲ್ಲುವ ಜೀತದಾಳುಗಳೂ ಅಲ್ಲ. ಜನರಿಂದ ಚುನಾಯಿತವಾದ ನಮ್ಮ ರಾಜ್ಯ ಸರ್ಕಾರವು ಇಲ್ಲಿನ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಕೇಂದ್ರದಿಂದ ಬರ ಪರಿಹಾರ ಕೇಳುವುದು ನ್ಯಾಯಸಮ್ಮತ ಹಕ್ಕು.

ಅದನ್ನು ಭಿಕ್ಷೆಗೆ ಹೋಲಿಸಿರುವುದು ಆರ್. ಅಶೋಕ್‌ಗೆ ಒಕ್ಕೂಟ ವ್ಯವಸ್ಥೆಯ ಬಗ್ಗೆ ಎಳ್ಳಷ್ಟೂ ಸಾಮಾನ್ಯ ಜ್ಞಾನವಿಲ್ಲ ಎಂಬುದನ್ನು ತೋರಿಸುತ್ತದೆ. ಇಂತಹ ವ್ಯಕ್ತಿಯನ್ನು ವಿಪಕ್ಷ ನಾಯಕನ ಸ್ಥಾನದಲ್ಲಿ ಕೂರಿಸಿರುವುದು ಬಿಜೆಪಿಯ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ರೈತರು ಭಿಕ್ಷುಕರಲ್ಲ, ದೇಶಕ್ಕೆ ಅನ್ನ ನೀಡುವ ಅನ್ನದಾತರು.

ದೇಶದ ಸಮೃದ್ಧಿಗೆ ರಾಜ್ಯ ಕೊಡುಗೆ ನೀಡಿದಾಗ ಅದನ್ನು ಹೆಮ್ಮೆಯಿಂದ ಸ್ವೀಕರಿಸುವ ಕೇಂದ್ರ ಸರ್ಕಾರ, ವಿಪತ್ತಿನ ಸಂದರ್ಭದಲ್ಲಿ ನಮ್ಮ ರೈತರು ನೆರವು ಕೇಳಿದರೆ ಅದನ್ನು ಭಿಕ್ಷೆ ಎಂದು ಬಿಂಬಿಸುವುದು ಯಾವ ರೀತಿಯ ಸಹಕಾರಿ ಒಕ್ಕೂಟ ವ್ಯವಸ್ಥೆ ಎಂದು ಪ್ರಶ್ನೆ ಮಾಡಿದ್ದಾರೆ.