ಬೆಂಗಳೂರು: ಬರ ಪರಿಹಾರ ನಿಧಿ ವಿಚಾರದಲ್ಲಿ ಬಿಜೆಪಿ ನಾಯಕರಿಗೆ ಪ್ರತಿಭಟನೆ ನಡೆಸುವ ಯಾವುದೇ ನೈತಿಕತೆ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ತನ್ನ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದೆ. ತಲಾ 2000 ರೂ.ಗಳಂತೆ ರೈತರ ಬ್ಯಾಂಕ್ ಖಾತೆಗಳಿಗೆ ಈಗಾಗಲೇ ಹಣ ವರ್ಗಾಯಿಸಲಾಗಿದೆ. ಕುಡಿಯುವ ನೀರು ಮತ್ತು ಇತರ ಸೌಲಭ್ಯಗಳಿಗಾಗಿ 545 ಕೋಟಿ ರೂ.ಗಳನ್ನು ಎಲ್ಲ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ. ಬೊಕ್ಕಸದಲ್ಲಿ ಹಣ ಇಲ್ಲ ಎಂದು ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ನಾಯಕರಲ್ಲಿ ಅದ್ಯಾವ ನೈತಿಕತೆ ಉಳಿದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಾರೆ ಎಂದು ಪ್ರಶ್ನಿಸಿದರಲ್ಲದೆ, ಕೇಂದ್ರದಿಂದ ಇನ್ನು ಬರ ಪರಿಹಾರ ಪರಿಹಾರ ಬಿಡುಗಡೆಯಾಗಿಲ್ಲ. ರಾಜ್ಯದ 27 ಸಂಸತ್ ಸದಸ್ಯರು ಪ್ರಧಾನಿಯವರಿಗಾಗಲೀ, ಗೃಹ ಸಚಿವರಿಗಾಗಲೀ ಯಾಕೆ ಮನವಿ ಮಾಡುತ್ತಿಲ್ಲ? ಎಂದು ಕೇಳಿದರು.
ನ್ಯಾಯಸಮ್ಮತವಾಗಿ ರಾಜ್ಯಕ್ಕೆ ಸಲ್ಲಬೇಕಾದ ಬರಪರಿಹಾರ ನಿಧಿ ಬಿಡುಗಡೆ ಮಾಡಲಿ ಅಂತ ಕೇಳಲಿ. ಅದನ್ನು ಮಾಡೋದು ಬಿಟ್ಟು ಇಲ್ಲಿ ಪ್ರತಿಭಟನೆ ನಡೆಸಿದರೆ ಅದಕ್ಕೇನು ಅರ್ಥ? ಎಂದು ಅಸಹನೆ ವ್ಯಕ್ತಪಡಿಸಿದರು.
ನಾವು ದೆಹಲಿಯಲ್ಲಿ ಪ್ರತಿಭಟನೆ ಮಾಡಲು ತೀರ್ಮಾನ ಮಾಡಿದ್ದು, ನಮಗೆ ಅನ್ಯಾಯ ಆಗಿದೆ ಎಂದು. ಬರಗಾಲದ ಸಂಧರ್ಭದಲ್ಲಿ ಕೂಡ ನಮಗೆ ಸಹಾಯ ಮಾಡದೇ ಇದ್ದರೆ ಹೇಗೆ? ಜನ ಸಂಕಷ್ಟದ ಸಮಯದಲ್ಲಿ ಕೂಡ ಕೇಂದ್ರ ಸ್ಪಂದಿಸಿಲ್ಲ. ಎನ್‌ಡಿಆರ್‌ಎ್ ನಲ್ಲೂ ವರ್ಷಕ್ಕೆ ನಮಗೆ ಇಂತಿಷ್ಟು ಕೊಡಬೇಕು ಎಂದಿದೆ. ಅದನ್ನೂ ಸಂಪೂರ್ಣ ಕೊಟ್ಟಿಲ್ಲ. ನಾವು ಮಹಾರಾಷ್ಟ್ರದ ಬಳಿಕ ಅತಿ ಹೆಚ್ಚು ಜಿಎಸ್‌ಟಿ ಕಟ್ಟುತ್ತೇವೆ. ನಮಗೆ ಯಾಕೆ ಮಲತಾಯಿ ಧೋರಣೆ ಎಂದು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮೊದಲ ಪಟ್ಟಿ, ಆದಷ್ಟು ಬೇಗ ಬಿಡುಗಡೆ ಆಗುತ್ತದೆ. ಅದಕ್ಕಾಗಿ ಸ್ಕ್ರಿನಿಂಗ್ ಕಮಿಟಿ ಸಭೆ ಆಗಬೇಕು. ಈಗಾಗಲೇ ಶಾರ್ಟ್ ಲಿಸ್ಟ್ ಮಾಡಲಾಗಿದೆ.
ನಾನು ಕೂಡ ಪಟ್ಟಿ ಬಿಡುಗಡೆಗೆ ಕಾಯುತ್ತಿದ್ದೇನೆ. ನಾವು ಚುನಾವಣೆ ಕೆಲಸ ಆರಂಭ ಮಾಡಬೇಕಿದೆ ಎಂದು ಪ್ರತಿಕ್ರಿಯಿಸಿದರು.
ಹೊಸದುರ್ಗ ತಾಲೂಕು ಬಾಗೂರು ಚನ್ನಕೇಶವ ದೇವಾಲಯಕ್ಕೆ ಕನಕ ಗುರುಪೀಠದ ಸ್ವಾಮೀಜಿ ಪ್ರವೇಶ ವಿವಾದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ನಾನು ಇದರ ಬಗ್ಗೆ ವಿವರ ಪಡೆದುಕೊಳ್ಳುತ್ತೇನೆ. ಇದು ನನ್ನ ಇಲಾಖೆಯ ವ್ಯಾಪ್ತಿಗೂ ಬರುವುದಿಲ್ಲ. ಇದು ಸಾಮಾಜಿಕ ವಿಚಾರ ಇದನ್ನು ಬಗೆಹರಿಸಬೇಕು ಎಂದು ಗೃಹ ಸಚಿವ ಡಾ.ಪರಮೇಶ್ವರ ಹೇಳಿದರು.