ಬೆಂಗಳೂರು: ಮಾತಿನ ಕಲೆ ಗೊತ್ತಿದ್ದರೆ ಯಾರನ್ನು ಬೇಕಾದರೂ ಮೂರ್ಖರ ನ್ನಾಗಿಸಬಹುದು ಎಂಬುದನ್ನು ನಿರೂಪಿಸಿರುವ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ನಕಲಿ ವಿಜ್ಞಾನಿ ಡ್ರೋನ್ ಪ್ರತಾಪ್ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಾಗುತ್ತೇಲೇ ಇರುತ್ತಾರೆ. ಮರುಬಳಕೆ ವಸ್ತುಗಳಿಂದ ಡ್ರೋನ್ ತಯಾರಿಸಿದ್ದೇನೆಂದು ಕಾಗೆ ಹಾರಿಸಿ ಜನರ ನಂಬಿಕೆಯನ್ನು ಹುಸಿ ಮಾಡಿದ ಡ್ರೋನ್ ಪ್ರತಾಪ್, ತೀವ್ರ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ, ಅವರ ವಿರುದ್ಧ ಸಾಕಷ್ಟು ಟ್ರೋಲ್ಗಳು ಆಗಿದ್ದವು. ಇಂದಿಗೂ ಅವರನ್ನು ಟ್ರೋಲ್ ಮಾಡುತ್ತಲೇ ಇರುತ್ತಾರೆ.
ಇದೀಗ ಟ್ರೋಲ್ ಮಾಡುವವರ ವಿರುದ್ಧ ಡ್ರೋನ್ ಪ್ರತಾಪ್ ಕಾನೂನು ಸಮರ ಸಾರಿದ್ದಾರೆ. ಸದ್ಯ ಡ್ರೋನ್ ಪ್ರತಾಪ್ ಅವರು ಹಳ್ಳಿಗಳಿಗೆ ಹೋಗಿ ಡ್ರೋನ್ ಪರಿಚಯ ಮಾಡಿಕೊಡುವ ಮೂಲಕ ಅವುಗಳ ಮಾರಾಟವನ್ನು ಮಾಡುತ್ತಿದ್ದಾರೆ. ಅವರು ಡ್ರೋನ್ ಹಾರಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಅಲ್ಲದೆ, ಹಲವರು ಪ್ರತಾಪ್ ಅವರನ್ನು ಇಂದಿಗೂ ಟ್ರೋಲ್ ಮಾಡುತ್ತಿರುವುದು ಅವರ ಗಮನಕ್ಕೆ ಬಂದಿದ್ದು, ಇದೀಗ ಅವರ ವಿರುದ್ಧ ಕಾನೂನಿನ ಸಮರ ಸಾರಿದ್ದಾರೆ.
ತನ್ನ ವಿರುದ್ಧ ಟ್ರೋಲ್ ಮಾಡಿದ ಯೂಟ್ಯೂಬರ್ಸ್ ವಿರುದ್ಧ ಡ್ರೋನ್ ಪ್ರತಾಪ್, ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮ್ಮೆ ದಾಖಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಡ್ರೋನ್ ಪ್ರತಾಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ನೇಮಿಸ್ ಮಧು ಎಂಬ ಯೂಟ್ಯೂಬರ್ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ದಾಖಲಿಸಿರುವುದಾಗಿ ಹೇಳಿದ್ದಾರೆ.
ಇದಿಷ್ಟೇ ಅಲ್ಲದೆ, ಸಂದೀಪ್, ಉತ್ತರ ಕರ್ನಾಟಕದ ಉಡಾಳ್ ಪಾವ್ಯ ಮತ್ತು ದಿವ್ಯಾ ವಂಸತ ವಿರುದ್ಧ ಡ್ರೋನ್ ಪ್ರತಾಪ್ ಮೊಕದ್ದಮ್ಮೆ ಹೂಡಿದ್ದು, ನೋಟಿಸ್ ಸಹ ಕಳುಹಿಸಿದ್ದಾರೆ. 30 ಲಕ್ಷ ರೂಪಾಯಿಯನ್ನು ಪರಿಹಾರವಾಗಿ ಕೇಳಿದ್ದಾರೆ. ನೀವು ಸುಳ್ಳಾ? ನಾನು ಸುಳ್ಳಾ? ಅಂತಾ ನೋಡೋಣ. ಬನ್ನಿ ಕೋರ್ಟಿನಲ್ಲಿ ನಿರ್ಧಾರವಾಗುತ್ತೆ. ಕೋರ್ಟಿನಲ್ಲೇ ನಿರ್ಧಾರ ಮಾಡಿಕೊಳ್ಳಿ. ಇನ್ಮೇಲೆ ನಮ್ಮ ನಿಮ್ಮ ಭೇಟಿ ಕೋರ್ಟಿನಲ್ಲಾಗುತ್ತೆ ಎಂದು ಡ್ರೋನ್ ಪ್ರತಾಪ್ ಸವಾಲು ಹಾಕಿದ್ದಾರೆ.
ಡ್ರೋನ್ ಪ್ರತಾಪ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹೇಗೆ ಹಣ ಮಾಡಬೇಕು? ಟ್ರೋಲ್ ಆಗುವಂತೆ ಏನಾದರೊಂದನ್ನು ಮಾಡಿ ಮತ್ತು ಸರಿಯಾದ ಸಮಯಕ್ಕೆ ಕಾಯಿರಿ ಹಾಗೂ ಮಾನನಷ್ಟ ಮೊಕದ್ದಮೆ ದಾಖಲಿಸಿ ಎಂದು ಕಾಮೆಂಟ್ ಮೂಲಕ ಡ್ರೋನ್ ಪ್ರತಾಪ್ ಅವರ ನಡೆಯನ್ನು ನೆಟ್ಟಿಗರು ಟೀಕಿಸಿದ್ದಾರೆ.