ಶಿವಮೊಗ್ಗ: ಹೊನ್ನಾಳ್ಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಇದ್ದ ಕಾರು ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಬಿದ್ದಿರುವುದನ್ನು ಡ್ರೋನ್ ಮೂಲಕ ಪತ್ತೆ ಮಾಡಲಾಯಿತು ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್‌ಕುಮಾರ್ ತಿಳಿಸಿದರು.
ಚಂದ್ರಶೇಖರ್ ನಿಗೂಢ ಸಾವಿನ ಪ್ರಕರಣದ ತನಿಖೆ ಚುರುಕುಗೊಂಡಿದ್ದು ಇನ್ನೆರಡು ದಿನಗಳಲ್ಲಿ ಮರಣೋತ್ತರ ಪರೀಕ್ಷೆ ಬರಲಿದೆ. ಜತೆಗೆ ಎಫ್‌ಎಸ್‌ಎಲ್ ವರದಿ, ಮರಣೋತ್ತರ ಪರೀಕ್ಷೆ ವರದಿ ಆಧಾರದ ಮೇಲೆ ತನಿಖೆ ನಡೆಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತನಿಖೆ ನಡೆಯುವಾಗ ಆಧಾರ ರಹಿತವಾಗಿ ಮಾತನಾಡಿದರೆ ಅದು ಸೂಕ್ತವಾಗುವುದಿಲ್ಲ. ಘಟನೆಯ ಸತ್ಯಾಸತ್ಯತೆಯನ್ನು ಖಂಡಿತ ಹೊರತೆಗೆಯುತ್ತೇವೆ. ಹುಬ್ಬಳ್ಳಿ ಮತ್ತು ದಾವಣಗೆರೆಯಿಂದ ತಂಡಗಳು ಬಂದು ಮಾದರಿ ಸಂಗ್ರಹಿಸಿವೆ ಎಂದರು.
ಚಂದ್ರಶೇಖರ್ ಸಾವಿಗೆ ಕೋಮುಬಣ್ಣ ಹಚ್ಚಿರುವ ಶಾಸಕ ರೇಣುಕಾಚಾರ್ಯ ಅವರ ಹೇಳಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಎಫ್‌ಐಆರ್‌ನಲ್ಲಿ ಏನು ಅಂಶಗಳು ಇರುತ್ತವೆಯೋ ಅದರ ಅಧಾರದ ಮೇಲೆ ತನಿಖೆ ನಡೆಸಲಾಗುವುದು. ನಾವು ಟೀಕೆ ಟಿಪ್ಪಣಿ ಮಾಡಿದಕ್ಕೆ ಪ್ರತಿಕ್ರಿಯಿಸುವುದು ತಪ್ಪಾಗುತ್ತದೆ. ಸಾಕ್ಷೃಧಾರ ಇದ್ದರೆ ಮಾತನಾಡಬೇಕಾಗುತ್ತದೆ. ತನಿಖೆಯಿಂದ ಸತ್ಯಾಂಶ ಹೊರಬರುತ್ತದೆ ಎಂದರು.
ತನಿಖೆಯಲ್ಲಿ ಅಗತ್ಯ ಬಿದ್ದರೆ ಯಾರೆಲ್ಲ ಇದ್ದರೋ ಅವರನ್ನು ವಿಚಾರಣೆ ಮಾಡಲಾಗುವುದು. ಪ್ರಕರಣದಲ್ಲಿ ಈಗಲೇ ಯಾರ‌್ಯಾರನ್ನೋ ಎಳೆತಂದು ಸೆನ್ಸೆಷನ್ ಸೃಷ್ಟಿಸುವುದು ಸರಿಯಲ್ಲ. ಅಲ್ಲದೆ ತನಿಖಾ ಹಂತದಲ್ಲಿ ಇರುವಾಗ ಎಲ್ಲ ವಿಷಯಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.