ನ್ಯೂಸ್

video/ ಕೆಆರ್​ಎಸ್​ ಡ್ಯಾಂನಲ್ಲಿ ಡ್ರೋನ್ ಕ್ಯಾಮರಾ ನಿಷೇಧ, 2 ವರ್ಷದ ಬಳಿಕ ಕೃತ್ಯ ಬಯಲು

arunakunigal

ಮಂಡ್ಯ: ಕೆಆರ್​ಎಸ್​ ಡ್ಯಾಂ ವ್ಯಾಪ್ತಿಯಲ್ಲಿ ಡ್ರೋನ್​ ಕ್ಯಾಮರಾ ಬಳಸುವಂತಿಲ್ಲ. ನಿಷೇಧಿತ ಪ್ರದೇಶವಾಗಿದ್ದರೂ ಅಪರಿಚಿತನೊಬ್ಬ ಜಲಾಶಯದ ಎರಡು ಕಿಮೀ ವ್ಯಾಪ್ತಿಯಲ್ಲಿ ಚಿತ್ರೀಕರಣ ಮಾಡಿದ್ದು, ಆ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ‌ ಜಾಲತಾಣದಲ್ಲಿ ವೈರಲ್​ ಆಗಿವೆ.

ಕೆಆರ್​ಎಸ್​ ಡ್ಯಾಂ ಸುರಕ್ಷತೆ ದೃಷ್ಠಿಯಿಂದ ಈ ವ್ಯಾಪ್ತಿಯಲ್ಲಿ ಡ್ರೋನ್ ಕ್ಯಾಮರಾವನ್ನು ಸರ್ಕಾರ ನಿಷೇಧಿಸಿದೆ. ಡ್ಯಾಂ ಭದ್ರತೆಗಾಗಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ. ಇಲ್ಲಿ ಯಾರೇ ಹೋದರೂ ಸಿಬ್ಬಂದಿ ತಪಾಸಣೆ ನಡೆಸುತ್ತಾರೆ. ಡ್ಯಾಂ ಚಿತ್ರೀಕರಣಕ್ಕೆಂದು ಮಾಧ್ಯಮದವರು ಹೋದರೆ ಅದಕ್ಕೂ ಇಲ್ಲಿನ ಸಿಬ್ಬಂದಿ ಅಡ್ಡಿ ಪಡಿಸುತ್ತಾರೆ. ಇಷ್ಟೊಂದು ಭದ್ರತೆ ನಡುವೆಯೂ ನಿಷೇಧಿತ ಪ್ರದೇಶದಲ್ಲಿ ಡ್ರೋನ್ ಕ್ಯಾಮರಾ ಮೂಲಕ ಜಲಾಶಯವನ್ನು ಚಿತ್ರೀಕರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಕೆಆರ್​ಎಸ್​ ಮೈದುಂಬಿ ಹರಿಯುತ್ತಿರುವ ದೃಶ್ಯವನ್ನು ಡ್ರೋನ್​ ಕ್ಯಾಮರಾ ಮೂಲಕ ವಿವಿಧ ಆಯಾಮಗಳಲ್ಲಿ ಸೆರೆಹಿಡಿದ ಅಪರಿಚಿತ ವ್ಯಕ್ತಿ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ್ದಾನೆ. ಈ ವಿಡಿಯೋವನ್ನು ಎರಡು ವರ್ಷದ ಹಿಂದೆಯೇ ಚಿತ್ರೀಕರಿಸಲಾಗಿದೆ ಎಂದು ಗೊತ್ತಾಗಿದೆ. ನಿಷೇಧಿತ ಪ್ರದೇಶದಲ್ಲಿ ಡ್ರೋನ್​ ಬಳಸಿದ್ದು, ಭದ್ರತಾ ಸಿಬ್ಬಂದಿ ಗಮನಕ್ಕೆ ಬಾರಲಿಲ್ಲವೇ? ಎಂಬ ಪ್ರಶ್ನೆಯೂ ಮೂಡಿದೆ.