ನ್ಯೂಸ್

ಬೃಹತ್​ ಬಂಡೆಗೆ ಕಾರು ಅಪ್ಪಚ್ಚಿ: ಮೂವರ ದುರಂತ ಸಾವು, ಚಾಲಕ ಬದುಕುಳಿದಿದ್ದೇ ರಣರೋಚಕ!

ಇಸ್ಲಮಾಬಾದ್​: ಆಯಸ್ಸು ಗಟ್ಟಿ ಇದ್ದರೆ ಯಮನೂ ಸಹ ಏನು ಮಾಡಲು ಆಗುವುದಿಲ್ಲ ಎಂಬ ಮಾತಿಗೆ ಪೂರಕವಾದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಭೂಕುಸಿತದಿಂದ ಜಾರಿದ ಬೃಹತ್​ ಬಂಡೆಯೊಂದು ಹೊಸದಾಗಿ ಖರೀದಿಸಿದ ಕಾರಿನ ಮೇಲೆ ಉರುಳಿಬಿದ್ದು ಅಪ್ಪಚ್ಚಿಯಾದರೂ ಪವಾಡವೆಂಬಂತೆ ಚಾಲಕ ಬದುಕಿ ಬಂದಿದ್ದಾನೆ.

ರಶೀದ್​ ಇಕ್ಬಾಲ್​ (46) ಬದಕುಳಿದ ಕಾರು ಚಾಲಕ. ತನ್ನ ಹೊಸ ಸುಜಕಿ ಕಾರಿನಲ್ಲಿ ಮೂವರು ಪ್ರಯಾಣಿಕರನ್ನು ಕರೆದೊಯ್ಯುತ್ತಿರುವಾಗ ಇದ್ದಕ್ಕಿಂದಂತೆ ದೊಡ್ಡ ಬಂಡೆಯೊಂದ ಆತನ ಕಾರಿನ ಮೇಲೆ ಬಿದ್ದು, ಕಾರನ್ನು ಅಪ್ಪಚ್ಚಿ ಮಾಡಿತು. ದುರಾದೃಷ್ಟವಶಾತ್​ ಮೂವರು ಪ್ರಯಾಣಿಕರು ದಾರುಣವಾಗಿ ಮೃತಪಟ್ಟರೆ, ಚಾಲಕ ಪ್ರವಾಡ ರೀತಿಯಲ್ಲಿ ಬದುಕುಳಿದಿದ್ದಾನೆ.

ಈ ಘಟನೆ ಮಾರ್ಚ್​ 24ರಂದು ದಕ್ಷಿಣ ಪಾಕಿಸ್ತಾನದ ಅಜಾದ್​ ಕಾಶ್ಮೀರ ವಲಯದ ಧಿರ್ಕೋಟ್ ಪಟ್ಟಣದಲ್ಲಿ​ ಸಂಭವಿಸಿದ ಭೂಕುಸಿತ ವೇಳೆ ನಡೆದಿದೆ. ಸುಮಾರು 1 ಟನ್​ ತೂಕದ ಬಂಡೆ ನೇರವಾಗಿ ಇಕ್ಬಾಲ್​ ಕಾರಿನ ಮೇಲೆಯೇ ಬಿದ್ದಿದೆ. ಪರಿಣಾಮ ಹೊಸ ಕಾರು ತಕ್ಷಣವೇ ಅಪ್ಪಚ್ಚಿಯಾಯಿತು. ಒಳಗಡೆಯಿದ್ದ ಮೂವರು ಪ್ರಯಾಣಿಕರು ಸ್ಥಳದಲ್ಲೆ ಬಂಡೆ ಅಡಿಗೆ ಸಿಲುಕಿ ಪ್ರಾಣಬಿಟ್ಟರೆ, ಬಹುದೊಡ್ಡ ಬಂಡೆಗೆ ಇಕ್ಬಾಲ್​ ತಲೆಯು ಕೆಲವೇ ಅಂಚಿನಲ್ಲಿ ತಪ್ಪಿಸಿಕೊಂಡಿತು.

ಇದನ್ನು ನೋಡಿದ ಸ್ಥಳೀಯರು ತಕ್ಷಣ ಇಕ್ಬಾಲ್​ ನೆರವಿಗೆ ಧಾವಿಸಿ, ಸುತ್ತಿಗೆ ಸಹಾಯದಿಂದ ಕಾರಿನ ಗಾಜನ್ನು ಒಡೆದು ಆತನ್ನು ಹೊರಗೆಳೆದು ಜೀವ ಉಳಿಸಿದ್ದಾರೆ. ಇಕ್ಬಾಲ್​ ತಲೆಯನ್ನು ಹಿಡಿದುಕೊಂಡು ಬಂಡೆ ಕದಲದಂತೆ ಸೂಕ್ಷ್ಮವಾಗಿ ಎಲ್ಲೆಲ್ಲಿ ಜಾಗ ಮಾಡಲು ಸಾಧ್ಯವೋ ಅಲ್ಲಲ್ಲಿ ಆಯುಧಗಳಿಂದ ಸ್ಥಳಾವಕಾಶಮಾಡಿ ಇಕ್ಬಾಲ್​ರನ್ನು ರಕ್ಷಿಸಿದರು.

ಸುಮಾರು 2 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಯಿತು. ಇಕ್ಬಾಲ್​ರನ್ನು ರಕ್ಷಿಸಿದ ಬೆನ್ನಲ್ಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಚ್ಚರಿಯೆಂದರೆ ಇಕ್ಬಾಲ್​ಗೆ ಕೇವಲ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು ಕಾರಿನಲ್ಲಿ ಸಿಲುಕಿದ್ದ ಉಳಿದ ಮೂವರ ಮೃತದೇಹಗಳನ್ನು ಹೊರತೆಗೆಯಲು ಹರಸಾಹಸವನ್ನೇ ಪಡಬೇಕಾಯಿತು. (ಏಜೆನ್ಸೀಸ್​)