ಕರಾವಳಿ ನದಿಗಳ ಮೂಲಕ ಸಮುದ್ರ ಸೇರುವ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯವನ್ನು ಮೂಲದಲ್ಲೇ ತಡೆಗಟ್ಟುವ ಉದ್ದೇಶದಿಂದ ರೂಪಿಸಲಾದ ಮಹತ್ವಾಕಾಂಕ್ಷೆಯ ಹಸಿರು ಸಂವಾದ ಅಭಿಯಾನಕ್ಕೆ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾನುವಾರ ಚಾಲನೆ ದೊರೆಯಿತು.
ಮಂಗಳೂರು: ಕರಾವಳಿ ನದಿಗಳ ಮೂಲಕ ಸಮುದ್ರ ಸೇರುವ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯವನ್ನು ಮೂಲದಲ್ಲೇ ತಡೆಗಟ್ಟುವ ಉದ್ದೇಶದಿಂದ ರೂಪಿಸಲಾದ ಮಹತ್ವಾಕಾಂಕ್ಷೆಯ ಹಸಿರು ಸಂವಾದ ಅಭಿಯಾನಕ್ಕೆ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾನುವಾರ ಚಾಲನೆ ದೊರೆಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಪರ್ಯಾವರಣ ಸಂರಕ್ಷಣಾ ತಂಡ ಹಾಗೂ ವಿವಿಧ ಶೈಕ್ಷಣಿಕ ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳು, ಕೈಗಾರಿಕೆಗಳು ಮತ್ತು ಆಡಳಿತ ವ್ಯವಸ್ಥೆಯ ಸಹಭಾಗಿತ್ವದಲ್ಲಿ ಈ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಆರಂಭಗೊಂಡಿದ್ದು, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಮತ್ತು ಸುಸ್ಥಿರ ಪರಿಸರ ಸಂರಕ್ಷಣೆಗೆ ಮಾದರಿಯಾಗುವ ಗುರಿ ಹೊಂದಿದೆ. ಕಾರ‌್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕರ‌್ಯದರ್ಶಿ ಜಯಲಕ್ಷಿ ರಾಯ್ಕೋಡ್ ಮಾತನಾಡಿ, ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯ ಪರಸ್ಪರ ಸಂಬಂಧ ಹೊಂದಿದ್ದು, ಸರ್ಕಾರದ ಯೋಜನೆಗಳು ಯಶಸ್ವಿಯಾಗಬೇಕಾದರೆ ಜನರ ಸಕ್ರಿಯ ಸಹಭಾಗಿತ್ವ ಅತ್ಯಗತ್ಯ. ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಪರಿಸರಕ್ಕೂ ಸಾರ್ವಜನಿಕ ಆರೋಗ್ಯಕ್ಕೂ ಗಂಭೀರ ಅಪಾಯವನ್ನುಂಟು ಮಾಡುತ್ತಿದೆ. ಆರೋಗ್ಯಕರ ಜೀವನಶೈಲಿ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳನ್ನು ಆಳವಡಿಸಿಕೊಳ್ಳುವುದು ಇಂದಿನ ಅಗತ್ಯ. ಪರಿಸರದ ಬಗ್ಗೆ ಪ್ರತಿಯೊಬ್ಬರೂ ವೈಯಕ್ತಿಕ ಹೊಣೆಗಾರಿಕೆ ಹೊಂದಿದಾಗ ಮಾತ್ರ ಸುಸ್ಥಿರ ಅಭಿವೃದ್ಧಿಯ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದರು.
ಪರ್ಯಾವರಣ ಸಂರಕ್ಷಣಾ ತಂಡದ ಪ್ರಾಂತ ಸಂಯೋಜಕ ವೆಂಕಟೇಶ್ ಸಂಗನಾಳ್ ಮಾತನಾಡಿ,
ಇಂದಿನ ದಿನಗಳಲ್ಲಿ ಜನರ ಖರೀದಿ ಸಾಮರ್ಥ್ಯ ಹೆಚ್ಚುತ್ತಿರುವಂತೆ ಬಳಕೆಯ ವಸ್ತುಗಳ ಪ್ರಮಾಣವೂ ಹೆಚ್ಚುತ್ತಿದ್ದು, ಅದರೊಂದಿಗೆ ತ್ಯಾಜ್ಯದ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಬಳಕೆ ಆಧಾರಿತ ಜೀವನಶೈಲಿಯ ಪರಿಣಾಮವಾಗಿ ಪರಿಸರದ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾಗಿದೆ. ಹಸಿರು ಸಂವಾದ ಅಭಿಯಾನದ ಮೂಲಕ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿ, ಗ್ರಾಮ ಮಟ್ಟದಲ್ಲೇ ಸುಸ್ಥಿರ ತ್ಯಾಜ್ಯ ನಿರ್ವಹಣೆಯ ಮಾದರಿಯನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಚರ‌್ಯ ಡಾ ಕುರಿಯನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಪರ್ಯಾವರಣ ಸಂರಕ್ಷಣಾ ತಂಡದ ಜಯರಾಮ್ ಬೊಳ್ಳಾಜೆ, ಹೊಸದಿಂಗತ ಪತ್ರಿಕೆಯ ಸಿಇಒ ಪಿ.ಎಸ್ ಪ್ರಕಾಶ್, ಪರಿಸರ ವಿಜ್ಞಾನಿ ಡಾ. ಬಿನಿಷಾ ಪಿ., ಘನ ತ್ಯಾಜ್ಯ ನಿರ್ವಹಣಾ ತಜ್ಞ ಹಾಗೂ ಫ್ರೆಂಡ್ಸ್ ಆಫ್ ಲೇಕ್ಸ್ ಸಂಸ್ಥೆಯ ಸಂಸ್ಥಾಪಕ ರಾಮಪ್ರಸಾದ್, ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ಅರ್ಜುನ ಕುಮಾರ್ ಇದ್ದರು.
ಹಸಿರು ಸಂವಾದ ಅಭಿಯಾನದ ಮಂಜುನಾಥ್ ಸ್ವಾಗತಿಸಿದರು, ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ ಶೆಟ್ಟಿ ಕಾರ‌್ಯಕ್ರಮ ನಿರೂಪಿಸಿದರು.
ಪರಿಸರ ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ಅಗತ್ಯ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಕರಾವಳಿ ಕರ್ನಾಟಕವು ಒಂದು ಕಡೆ ಅರಬ್ಬಿ ಸಮುದ್ರ ಹಾಗೂ ಮತ್ತೊಂದು ಕಡೆ ವಿಶ್ವದ ಜೀವವೈವಿಧ್ಯದ ಅತ್ಯಂತ ಸೂಕ್ಷ್ಮ ಪರಿಸರ ವಲಯಗಳಲ್ಲಿ ಒಂದಾದ ಪಶ್ಚಿಮ ಘಟ್ಟಗಳಿಂದ ಆವೃತವಾಗಿರುವ ಅಪರೂಪದ ಭೌಗೋಳಿಕ ಪ್ರದೇಶವಾಗಿದೆ. ಇಂತಹ ಅಮೂಲ್ಯ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಪಶ್ಚಿಮ ಘಟ್ಟಗಳು ಈ ಭಾಗದ ಜೀವನಾಡಿ ಹಾಗೂ ಶ್ವಾಸಕೋಶದಂತಿವೆ. ಅವು ಕೇವಲ ಜೀವವೈವಿಧ್ಯದ ತಾಣಗಳಷ್ಟೇ ಅಲ್ಲ, ಕರಾವಳಿ ಭಾಗದ ಹವಾಮಾನ ಸಮತೋಲನ, ಜಲಸಂಪನ್ಮೂಲ ಮತ್ತು ಪರಿಸರ ಆರೋಗ್ಯವನ್ನು ಕಾಪಾಡುವ ಪ್ರಮುಖ ನೈಸರ್ಗಿಕ ವ್ಯವಸ್ಥೆಯಾಗಿವೆ. ಆದ್ದರಿಂದ ಪರಿಸರ ಸಂರಕ್ಷಣೆಯನ್ನು ಅಭಿವೃದ್ಧಿಗೆ ವಿರುದ್ಧವಾದ ವಿಚಾರವಾಗಿ ನೋಡದೆ, ಸುಸ್ಥಿರ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿ ಪರಿಗಣಿಸಬೇಕು ಎಂದರು.
-------------------------