ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿ ಹುಸೇನ್‌ಪುರ ಸೇತುವೆಯ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ದೊರಕಿದೆ.
ಅರ್ಧ ಶತಮಾನಗಳ ಇತಿಹಾಸ ಹೊಂದಿದ್ದ ಈ ಪಾರಂಪರಿಕ ಸೇತುವೆಯ ಶಿಥಿಲಾವಸ್ಥೆಯ ಕುರಿತು ಜು.8ರಂದು ವಿಜಯವಾಣಿ ಪತ್ರಿಕೆಯಲ್ಲಿ ಪಾರಂಪರಿಕ ಸೇತುವೆ ಶಿಥಿಲ ಎಂಬ ಶೀರ್ಷಿಕೆಯಡಿ ವಿಶೇಷ ಲೇಖನ ಪ್ರಕಟಗೊಂಡಿತ್ತು.
ಬಿಳಿಕೆರೆ ಭಾಗದ ಸಾಮಾಜಿಕ ಕಾರ್ಯಕರ್ತ ಜನಧ್ವನಿ ಫೌಂಡೇಶನ್ ಅಧ್ಯಕ್ಷ ಆಯರಹಳ್ಳಿ ಪಿ.ಪ್ರವೀಣ್ ಸೇತುವೆ ಅಭಿವೃದ್ಧಿಗಾಗಿ ಹೋರಾಟ ನಡೆಸಿದ್ದರು. ಪತ್ರಿಕೆಯಲ್ಲಿ ವರದಿ ಪ್ರಕಟವಾದ ನಂತರ ಜಾಗೃತಗೊಂಡ ಲೋಕೋಪಯೋಗಿ ಇಲಾಖೆ ಕಾಮಗಾರಿ ಪಡೆದಿದ್ದ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿ ಕಾಮಗಾರಿ ಆರಂಭಿಸಲು ಸೂಚಿಸಿದ್ದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಗೊಂಡಿದೆ. ಸೇತುವೆಯ ಎರಡೂ ಬದಿಯ ಸಂಪರ್ಕದ ರಸ್ತೆಗಳ ಅಭಿವೃದ್ದಿಕಾರ್ಯ, ಸೇತುವೆಯ ಮೇಲಿನ ಹಳ್ಳಕೊಳ್ಳಗಳನ್ನು ದುರಸ್ತಿಗೊಳಿಸುವ ಕಾರ್ಯ ನಡೆದಿದೆ.
ಫೌಂಡೇಶನ್ ವತಿಯಿಂದ ಸತತ ಹೋರಾಟ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ವಿಜಯವಾಣಿ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಗೊಂಡ ನಂತರ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಕಾಮಗಾರಿ ಆರಂಭಿಸಿದೆ. ಈಭಾಗದ ರೈತರ ಬಹುವರ್ಷಗಳ ಕನಸು ನನಸಾಗುತ್ತಿರುವುದು ಸಂತಸ ತಂದಿದೆ.
ಆಯರಹಳ್ಳಿ ಪಿ.ಪ್ರವೀಣ್, ಅಧ್ಯಕ್ಷ, ಜನಧ್ವನಿ ಫೌಂಡೇಶನ್, ಹುಣಸೂರು