ತಲಕಾಡು: ತಲಕಾಡು ಗ್ರಾಮ ದೇವತೆ ಶ್ರೀ ಬಂಡರಸಮ್ಮ ಹಬ್ಬಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಮೂರು ದಿನಗಳ ಕಾಲ ವಿಜೃಂಭಣೆಯಿಂದ ಹಬ್ಬ ನಡೆಯಲಿದ್ದು, ಗ್ರಾಮದ ಮುಖ್ಯರಸ್ತೆಯ ಉದ್ದಕ್ಕೂ ಬಣ್ಣ ಬಣ್ಣದ ವಿದ್ಯುತ್ ದೀಪ ಹಾಗೂ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ.
ದೇಗುಲದಲ್ಲಿ ಬೆಳಗ್ಗೆ ವಿಪ್ರರ ಮೊದಲ ಪೂಜೆ ನಂತರ ಮಹಾಭಿಷೇಕ, ತಂಪು ಎಡೆ ಪೂಜೆಯನ್ನು ಗ್ರಾಮದ ಮುಖಂಡರ ಸಮ್ಮುಖದಲ್ಲಿ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಪ್ರಧಾನ ಅರ್ಚಕ ಟಿ.ಪಿ.ಬಸವರಾಜಪ್ಪ ಸರದಿ ಹಾಗೂ ಅರ್ಚಕ ಪಿ.ಬಸವಣ್ಣ ಪೂಜೆ ನೆರವೇಸಿದರು.
ಬಂಡಿಗೆ ಪೂಜೆ: ಮಧ್ಯಾಹ್ನ ವಡೆಯಾಂಡಹಳ್ಳಿ ಗ್ರಾಮದಿಂದ ಅಲಂಕೃತ ಮೊದಲ ಬಂಡಿಗೆ ಪೂಜೆ ಸಲ್ಲಿಸುವ ಮೂಲಕ ಗ್ರಾಮಸ್ಥರು ಬೀಳ್ಕೋಟ್ಟರು. ನಂತರ ಕನಕ ನಗರದ ಮೂಲಕ ಮೆರವಣಿಗೆಯಲ್ಲಿ ಸಾಗಿದ ಬಂಡಿ ಒಕ್ಕಲಿಗರ ಬೀದಿಯ ರಾಮಮಂದಿರದ ಬಳಿ ಮೆರವಣಿಗೆ ಸಜ್ಜಾಗಿ ನಿಂತಿದ್ದ ಮತ್ತೊಂದು ಬಂಡಿಯ ಜತೆಯಾಗಿ ದೇಗುಲದ ಬಳಿಗೆ ಧಾವಿಸಿದವು.
ದೇಗುಲದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿದ ಎರಡು ಬಂಡಿಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಹಳೇ ತಲಕಾಡಿನ ಕಡೆಗೆ ಮೆರವಣಿಗೆಯಲ್ಲಿ ಸಾಗಿದವು. ಈ ವೇಳೆ ರೈತರು ಬಂಡಿಗೆ ಎತ್ತುಗಳನ್ನು ಕಟ್ಟಿ ಹರಕೆ ತೀರಿಸಿದರು.
ಹಳೇ ತಲಕಾಡಿನಲ್ಲಿ ಸಿದ್ಧಗೊಂಡಿದ್ದ ಮತ್ತೊಂದು ಬಂಡಿ ಸೇರಿ ಒಟ್ಟು ಮೂರು ಬಂಡಿಗಳನ್ನು ಶ್ರೀ ವೈದ್ಯನಾಥೇಶ್ವರಸ್ವಾಮಿಯ ರಥಬೀದಿಯಲ್ಲಿ ಓಟಕ್ಕೆ ಬಿಡಲಾಯಿತು. ಸುಮಾರು ಒಂದು ಗಂಟೆ ಕಾಲ ನಡೆದ ಬಂಡಿ ಉತ್ಸವವನ್ನು ನೆರೆದಿದ್ದ ಭಕ್ತರು ಕಣ್ತುಂಬಿಕೊಂಡರು.
ಬಂಡಿ ಉತ್ಸವ ಮುಗಿದ ಬಳಿಕ ಹೊಸ ತಲಕಾಡಿನತ್ತ ಎರಡು ಬಂಡಿಗಳು ಮರಳಿದವು. ಈ ವೇಳೆ ಹೊಸತಲಕಾಡಿನ ಮಡೆಗದ್ದೆ ಹಾಗೂ ದೇಗುಲದ ಬಳಿ ಹೊಸ ಮಡಕೆಯಲ್ಲಿ ಪೊಂಗಲ್ ತಯಾರಿಸಿದ ಭಕ್ತರು ಬಂಡಿಗೆ ನೈವೇದ್ಯ ಅರ್ಪಿಸಿದರು. ಬುಧವಾರ ಬೆಳಗ್ಗೆ ಹುಲಿ ವಾಹನೋತ್ಸವ (ಕನಕನ್ನಡಿ) ನೆರವೇರಲಿದೆ. ತಲಕಾಡು ಪೊಲೀಸ್ ಠಾಣೆಯ ಪಿಎಸ್‌ಐ ಬಿ.ಬಸವರಾಜು ನೇತೃತ್ವದಲ್ಲಿ ಭದ್ರತೆ ನಿಯೋಜಿಸಲಾಗಿತ್ತು.