ಹನೂರು: ತಾಲೂಕಿನ ಗ್ರಾಮಗಳಿಗೆ ಬೇಸಿಗೆಯಲ್ಲಿ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸುವುದು ಸುಲಭದ ಮಾತಲ್ಲ. ಹೀಗಿರುವಾಗ ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಂಡಿಪಾಳ್ಯ ಗ್ರಾಮದ ತೊಂಬೆಯಲ್ಲಿ ಶುಕ್ರವಾರ ಕುಡಿಯುವ ನೀರು ಪೋಲಾಗುತ್ತಿರುವುದು ಕಂಡುಬಂತು. ಇದು ನಿಜಕ್ಕೂ ವಿಪರ್ಯಾಸ.
ತಾಲೂಕು ಹೆಚ್ಚು ಬರಡು ಭೂಮಿಯಾಗಿದ್ದು, ಮಳೆಯಾಶ್ರಿತ ಪ್ರದೇಶವಾಗಿದೆ. ಮಳೆಯಾದರೆ ಮಾತ್ರ ಹಳ್ಳಕೊಳ್ಳಗಳಲ್ಲಿ ನೀರು ಹರಿದು, ಕೆರೆ-ಕಟ್ಟೆ ಹಾಗೂ ಜಲಾಶಯಗಳಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ಮಟ್ಟ ಸುಧಾರಣೆಗೊಳ್ಳುತ್ತದೆ. ಇದರಿಂದ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಸುವುದಕ್ಕೆ ಸಾಧ್ಯವಾಗುತ್ತದೆ. ಬೇಸಿಗೆ ಬಂತೆಂದರೆ ಪ್ರತಿ ವರ್ಷವೂ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಲೇ ಇದೆ. ಬಿಂದಿಗೆ ನೀರಿಗೂ ಪರದಾಡಬೇಕಿದೆ. ಅದರಂತೆಯೇ ತಾಲೂಕಿನಲ್ಲಿ ಪ್ರಸ್ತುತ ಸ್ಥಿತಿಯು ಇದೆ. ಈ ಸಂಬಂಧ ಈಗಾಗಲೇ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಯೂ ಆದ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಲಕ್ಷ್ಮೀ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಗ್ರಾಮಗಳಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ ಹಾಗೂ ಸಮಸ್ಯೆ ಪರಿಹರಿಸುವಿಕೆ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದಾರೆ. ಆದರೂ ಕೆಲವೊಂದು ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಪ್ಪಿಲ್ಲ. ಹಾಗಾಗಿ ಈ ಬೇಸಿಗೆಯಲ್ಲಿ ಪ್ರತಿ ಗ್ರಾಮದಲ್ಲೂ ನೀರನ್ನು ಮಿತವಾಗಿ ಬಳಸುವುದು ಹಾಗೂ ಪೋಲಾಗದಂತೆ ತಡೆಗಟ್ಟುವುದು ಅಗತ್ಯವೂ ಅನಿವಾರ್ಯವೂ ಆಗಿದೆ. ಇದು ಅಧಿಕಾರಿಗಳ ಕರ್ತವ್ಯವೂ ಆಗಿದೆ.
ಆದರೆ ಲೊಕ್ಕನಹಳ್ಳಿ ಗ್ರಾಪಂ ಅಧಿಕಾರಿ ಹಾಗೂ ಸಿಬ್ಬಂದಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಿರ್ವಹಣೆಯ ನಿರ್ಲಕ್ಷ್ಯದ ಪರಿಣಾಮ ಶುಕ್ರವಾರ ಆಂಡಿಪಾಳ್ಯ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಮೀಪದಲ್ಲಿರುವ ತೊಂಬೆಯಲ್ಲಿ ನೀರು ಭರ್ತಿಯಾಗಿ ಗಂಟೆಗಟ್ಟಲೇ ಚರಂಡಿಗೆ ಹರಿದು ಪೋಲಾಯಿತು. ತಾಲೂಕಿನ ಕೆಲವು ಗ್ರಾಮಗಳಲ್ಲಿ ಒಂದು ಬಿಂದಿಗೆ ಕುಡಿಯುವ ನೀರು ಸಿಕ್ಕರೆ ಸಾಕು ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಇದೆ. ಕೆಲವೊಂದು ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಆಂಡಿಪಾಳ್ಯದಲ್ಲಿ ಕುಡಿಯುವ ನೀರು ಚರಂಡಿ ಪೋಲಾಗುತ್ತಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ ನೀರು ಪೋಲಾಗುವುದನ್ನು ತಡೆಗಟ್ಟುವಂತೆ ಒತ್ತಾಯಿಸಿದ್ದಾರೆ.