ನ್ಯೂಸ್

ಮದ್ಯ ಸಿಗುತ್ತಿಲ್ಲವೆಂದು ಹೀಗೆಲ್ಲ ಮಾಡ್ತಿದ್ದಾರಾ ಕುಡುಕರು? ಹಂಗೇನಾದ್ರೂ ಇದ್ರೆ ಇವತ್ತೇ ನಿಲ್ಲಿಸಿಬಿಡಿ...ಇಲ್ದಿದ್ರೆ ಜೀವಕ್ಕೆ ಅಪಾಯ ಖಂಡಿತ..

ಹುಬ್ಬಳ್ಳಿ: ಮದ್ಯ ಸಿಗದಿದ್ದರಿಂದ ಕುಡುಕರೆಲ್ಲ ಸ್ಯಾನಿಟೈಸರ್​ ಸೇವನೆ ಮಾಡುತ್ತಿದ್ದಾರೆ ಎಂಬ ವಿಷಯವೊಂದು ಸೋಷಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಿತ್ತು. ಹುಬ್ಬಳ್ಳಿಯ ತೊರವಿ ಹಕ್ಕಲ ಪ್ರದೇಶದ್ದು ಎಂದು ಹೇಳಲಾದ ವಿಡಿಯೋವೊಂದರಲ್ಲಿ ಅನೇಕ ಸ್ಯಾನಿಟೈಸರ್​ ಬಾಟಲಿಗಳು ಬಿದ್ದಿರುವುದು ಕಾಣುತ್ತದೆ. ಅವೆಲ್ಲ ಕುಡಿದು ಬಿಸಾಕಿರುವಂಥವು ಎಂದು ಹೇಳಲಾಗಿತ್ತು.

ಮದ್ಯದಂಗಡಿಗಳು ತೆರೆಯದ ಕಾರಣ ಅಲ್ಕೋಹಾಲ್​ ಅಂಶ ಇರುವ ಸ್ಯಾನಿಟೈಸರ್​ಗಳನ್ನೇ ಕುಡಿಯುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ದಿಗ್ವಿಜಯ ನ್ಯೂಸ್​ ವರದಿ ಮಾಡಿತ್ತು.

ಕುಡುಕರು ಸ್ಯಾನಿಟೈಸರ್​ ಸೇವನೆ ಮಾಡುತ್ತಿದ್ದಾರೆ ಎಂಬ ವರದಿಯಿಂದ ಕೂಡಲೇ ಎಚ್ಚೆತ್ತ ಅಬಕಾರಿ ಇಲಾಖೆ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಕ್ರಮಕ್ಕೆ ಮುಮದಾಗಿದ್ದಾರೆ.

ದಿಗ್ವಿಜಯ ನ್ಯೂಸ್​​​ಗೆ ಪಾಲಿಕೆ ಆರೋಗ್ಯಾಧಿಕಾರಿ ಪ್ರಭು ಬಿರಾದಾರ ಪ್ರತಿಕ್ರಿಯೆ ನೀಡಿದ್ದು, ಜನ ಈ ರೀತಿ ವರ್ತನೆ ಮಾಡುತ್ತಿರುವುದು ಸರಿಯಲ್ಲ. ಆರೋಗ್ಯಕ್ಕೆ ತೀವ್ರ ಹಾನಿಕಾರಕ ಇದು. ಮದ್ಯ ಸೇವನೆಯನ್ನು ಚಟ ಮಾಡಿಕೊಂಡವರು ಹೀಗೆ ವರ್ತಿಸುತ್ತಾರೆ. ನಾವು ಅಂಥವರಿಗೆ ತಿಳಿವಳಿಕೆ ಹೇಳುತ್ತೇವೆ ಎಂದಿದ್ದಾರೆ.

ಸದ್ಯ ಸ್ಯಾನಿಟೈಸರ್​ ನಿಷೇಧ​ ಮಾಡಲು ಸಾಧ್ಯವಿಲ್ಲ. ಈಗ ಅದು ಬಳಕೆಗೆ ಅನಿವಾರ್ಯವಾಗಿದೆ. ಜನರೇ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.

ಕುಡಿತವನ್ನು ಚಟವಾಗಿಸಿಕೊಂಡವರು ಹೀಗೆ ಸ್ಯಾನಿಟೈಸರ್​ ಕುಡಿಯುತ್ತಿರುವ ಬಗ್ಗೆ ಧಾರವಾಡದ ಹಿರಿಯ ವೈದ್ಯ ಡಾ. ಪ್ರಕಾಶ್​ ರಾಮನಗೌಡರ್​ ಪ್ರತಿಕ್ರಿಯೆ ನೀಡಿದ್ದಾರೆ.

ಹ್ಯಾಂಡ್​ಸ್ಯಾನಿಟೈಸರ್​​ನಲ್ಲಿ ಎಥೆನಾಲ್​ ಇದ್ದರೂ, ಅದಕ್ಕೂ, ಮದ್ಯದಲ್ಲಿ ಬಳಸುವ ಎಥೆನಾಲ್​ಗೂ ವ್ಯತ್ಯಾಸವಿದೆ. ಮದ್ಯದ ಅಂಶವಿದೆ ಎಂದು ಸ್ಯಾನಿಟೈಸರ್​ ಕುಡಿದರೆ ಜೀವಕ್ಕೇ ಅಪಾಯ ತಂದುಕೊಂಡಂತೆ ಎಂದು ಎಚ್ಚರಿಕೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)