ನ್ಯೂಸ್

ಗುಜರಾತ್​ ಮತ ಹಂಚಿಕೆಯಲ್ಲಿ ಭಾರಿ ಬದಲಾವಣೆ: ಬಿಜೆಪಿ ಮತ ಗಳಿಕೆಯಲ್ಲಿ ಏರಿಕೆ, ಕಾಂಗ್ರೆಸ್​ಗೆ ಮುಳ್ಳಾದ ಎಎಪಿ

ಅಹಮದಾಬಾದ್​: ಗುಜರಾತ್​ ವಿಧಾನಸಭಾ ಚುನಾವಣೆಯ ಮತ ಹಂಚಿಕೆಯಲ್ಲಿ ಈ ಬಾರಿ ಭಾರಿ ಬದಲಾವಣೆಯಾಗಿದೆ. ಬಿಜೆಪಿ ಮತಗಳಿಕೆಯಲ್ಲಿ ಏರಿಕೆಯಾಗಿದ್ದು, ಕಾಂಗ್ರೆಸ್​ ಮತ ಗಳಿಕೆಯಲ್ಲಿ ಕುಸಿತು ಕಂಡಿದೆ.

ಇದೇ ಮೊದಲ ಬಾರಿಗೆ ಗುಜರಾತ್​ ಚುನಾವಣೆಯಲ್ಲಿ ಸ್ಪರ್ಧಿಸಿರುವ ಆಮ್​ ಆದ್ಮಿ ಪಕ್ಷ ಗಮನಾರ್ಹ ಸಾಧನೆ ಮಾಡಿದೆ. ಆದರೆ, ಬಿಜೆಪಿ ಪ್ರಬಲ ಪೈಪೋಟಿ ನೀಡಲಿದೆ ಎಂಬ ಮಾತುಗಳು ಮಾತ್ರ ಹುಸಿಯಾಗಿದ್ದು, ಬಿಜೆಪಿಗೆ ಬದಲಾಗಿ ಕಾಂಗ್ರೆಸ್​ ಪಕ್ಷಕ್ಕೆ ಎಎಪಿ ಮಗ್ಗಲು ಮುಳ್ಳಾಗಿದೆ.

ಈ ಬಾರಿ ಕಾಂಗ್ರೆಸ್​ ಮತಗಳು ಬಿಜೆಪಿ ಮತ್ತು ಎಎಪಿಗೆ ವಿಭಜನೆಯಾಗಿದೆ. ಶೇ. 55ರಷ್ಟು ಮತ ಗಳಿಸಿ ಬಿಜೆಪಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಆದರೆ, ಕಾಂಗ್ರೆಸ್​ ಮತಗಳಿಕೆ ಶೇ. 27ರಿಂದ 15ಕ್ಕೆ ಕುಸಿತ ಕಂಡಿದೆ. ಇದೇ ಮೊದಲ ಬಾರಿಗೆ ಗುಜರಾತ್​ ಚುನಾವಣಾ ಅಖಾಡಕ್ಕೆ ಇಳಿದಿರುವ ಎಎಪಿ ಶೇ. 13 ಮತ ಗಳಿಕೆಯೊಂದಿಗೆ ಮೊದಲ ಬಾರಿಗೆ ಎಲ್ಲರ ಗಮನ ಸೆಳೆದಿದೆ.

ಮತ ಎಣಿಕೆಯ ಸದ್ಯದ ಟ್ರೆಂಡ್​ ಪ್ರಕಾರ ಗುಜರಾತ್​ನಲ್ಲಿ ಆಡಳಿತಾರೂಢ ಬಿಜೆಪಿ 158 ಸ್ಥಾನಗಳಲ್ಲಿ ಮುಂದಿದ್ದರೆ, ಕಾಂಗ್ರೆಸ್​ 18, ಎಎಪಿ 7 ಮತ್ತು ಇತರೆ 5 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ಒಟ್ಟು 182 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಗುಜರಾತ್​ನಲ್ಲಿ ಅಧಿಕಾರ ರಚನೆಗೆ 92 ಮ್ಯಾಜಿಕ್​ ನಂಬರ್​ ಬೇಕಿದೆ. ಆದರೆ, ಬಿಜೆಪಿ ಈಗಾಗಲೇ ಮ್ಯಾಜಿಕ್​ ನಂಬರ್​ ದಾಟಿ ಮುಂದೆ ಸಾಗಿದ್ದು, ಅಧಿಕಾರ ಹಿಡಿಯುವುದು ಖಚಿತವಾಗಿದೆ. (ಏಜೆನ್ಸೀಸ್​)