ಕೋಲಾರ : ಪುರುಷ- ಮಹಿಳೆಯರ ಲಿಂಗಾನುಪಾತದಲ್ಲಿ ಹೆಚ್ಚಿನ ಅಂತರ ಕಂಡುಬಂದಿದ್ದು, ಮಹಿಳೆಯರ ಸಂಖ್ಯೆ ಕಡಿಯಾಗಲು ಯಾರು ಕಾರಣ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಸ್ನೇಹ ವಿ.ಸಿ ಹೇಳಿದರು.
ನಗರದ ಸ್ಕೌಟ್ಸ್ ಭವನದಲ್ಲಿ ಭಾರತ್ ಸ್ಕೌಟ್ಸ್-ಗೈಡ್ಸ್, ರೋಟರಿ ಕೋಲಾರ ನಂದಿನಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಗಳವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾವಂತರ ಕುಟುಂಬಗಳಲ್ಲೇ ಭ್ರೂಣ ಹತ್ಯೆ ನಡೆಯುತ್ತಿರುವುದು ಬೇಸರದ ಸಂಗತಿ. ಮಹಿಳೆಯರು, ಪುರುಷರ ಸಂಖ್ಯೆಯಲ್ಲಿ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ಭ್ರೂಣ ಹತ್ಯೆ ನಿಲ್ಲಿಸಬೇಕು ಎಂದರು.
ಮಹಿಳೆ ಮತ್ತು ಪುರುಷರು ಸಮಾಜದ ಅವಿಭಾಜ್ಯ ಅಂಗ. ಇಬ್ಬರ ನಡುವೆ ಯಾವುದೇ ಭೇದ-ಭಾವ ಇರಬಾರದು. ಮಹಿಳೆಯರು ಮನೆ ಕೆಲಸಗಳಿಗೆ ಸೀಮಿತಗೊಳ್ಳದೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಾಗ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.
ಸ್ಕೌಟ್ಸ್-ಗೈಡ್ಸ್ ಸಂಸ್ಥೆ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಮಾತನಾಡಿ, ನಾಗರಿಕ ಸಮಾಜದಲ್ಲಿ ಇಂದಿಗೂ ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ ನಡೆಯುತ್ತಿರುವುದು ವಿಷಾದದ ಸಂಗತಿ. ಮಹಿಳೆಯರ ರಕ್ಷಣೆಗಿರುವ ಕಾನೂನುಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು ಎಂದರು.
ಸ್ಕೌಟ್ಸ್ ಆಯುಕ್ತ ಸುರೇಶ್, ಗೈಡ್ಸ್ ಆಯುಕ್ತೆ ಕೆ.ಆರ್.ಜಯಶ್ರೀ, ಸಮಾಜ ಸೇವಕ ಸಿಎಂಆರ್ ಶ್ರೀನಾಥ್, ನರ್ಮದ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅರುಣಾ, ರೋಟರಿ ಉಪ ರಾಜ್ಯಪಾಲ ಗೋಪಾಲರೆಡ್ಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ನಿರ್ದೇಶಕ ಎಸ್.ಚಂದ್ರಶೇಖರ್, ಗೈಡ್ ರಾಜ್ಯ ಪ್ರತಿನಿಧಿ ಎಂ.ಲತಾ, ಜಿಲ್ಲಾ ತರಬೇತಿ ಆಯುಕ್ತೆ ಶಾಂತಮ್ಮ, ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು, ಸಂಘಟಕ ವಿ.ವಿಶ್ವನಾಥ್, ಜಂಟಿ ಕಾರ್ಯದರ್ಶಿ ಎನ್.ಉಮಾದೇವಿ, ತಾಲೂಕು ಅಧ್ಯಕ್ಷ ಶಶಿಕುಮಾರ್, ವಿಠಲ್ ರಾವ್ ಹಾಜರಿದ್ದರು.
ವಿವಿಧ ಕ್ಷೇತ್ರದ ಸಾಧಕ ಮಹಿಳೆಯರಾದ ವಿನುತಾಕೃಷ್ಣ, ಲತಾ, ಡಾ. ಕೆ.ಆರ್. ಮಂಜುಳಾ, ಶಾಂತಮ್ಮ, ಉಮಾದೇವಿ ಅವರನ್ನು ಸನ್ಮಾನಿಸಲಾಯಿತು.
ರಾಜ್ಯದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವ-ಸಹಾಯ ಗುಂಪು ರಚಿಸಿ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಸಮಾಜದ ಮುಖ್ಯವಾಹಿನಿಗೆ ಬರಲು ಯೋಜನೆಯಿಂದ ಬಿಡುಗಡೆಯಾಗುವ ಸೌಲಭ್ಯ ಪಡೆಯಬೇಕು. ಜೆ.ಚಂದ್ರಶೇಖರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಜಿಲ್ಲಾ ನಿರ್ದೇಶಕ