ರಿಪ್ಪನ್‌ಪೇಟೆ: ನಮ್ಮ ಪ್ರಾಚೀನ ಧಾರ್ಮಿಕ ಆಚರಣೆಗಳು ಜೀವನದಲ್ಲಿ ಉನ್ನತ ಮೌಲ್ಯಗಳನ್ನು ರೂಢಿಸುವಂತೆ ಪ್ರೇರಣೆ ನೀಡುತ್ತವೆ ಎಂದು ಹೊಂಬುಜ ಜೈನ ಮಠದ ಡಾ. ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಶ್ರೀಕ್ಷೇತ್ರ ಹೊಂಬುಜ ಮಹಾ ಸಂಸ್ಥಾನದ ಶಾಖಾ ಕೇಂದ್ರವಾಗಿರುವ ಶ್ರೀ ಕುಂದಕುಂದಾಚಾರ್ಯರ ತಪೋಭೂಮಿ ಶ್ರೀ ಕುಂದಾದ್ರಿ ಕ್ಷೇತ್ರದಲ್ಲಿ ಭಾನುವಾರ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ದೀಪೋತ್ಸವ ಸಂದರ್ಭದಲ್ಲಿ ಆಶೀರ್ವಚನ ನೀಡಿ, ಮಕರ ಸಂಕ್ರಾಂತಿ ಆಚರಣೆಯಿಂದ ಎಲ್ಲರ ಜೀವನದಲ್ಲಿ ಉನ್ನತಿಯಾಗಿ ರಾಷ್ಟ್ರ ಸಮೃದ್ಧಗೊಳ್ಳಲಿ ಎಂದು ಆಶಿಸಿದರು.
ನಿಸರ್ಗದ ಪ್ರಶಾಂತ ಪರಿಸರದಲ್ಲಿ ಆರಾಧನಾ ಪುಣ್ಯಕ್ಷೇತ್ರಗಳನ್ನು ನಿರ್ಮಿಸಿ, ಧಾರ್ಮಿಕ ಶ್ರದ್ಧೆಯ ಆಚರಣೆಗಳನ್ನು ನೆರವೇರಿಸಲು ಸಮಾಜ ಬಾಂಧವರನ್ನು ಒಗ್ಗೂಡಿಸುವ ಮೌಲ್ಯಾಧಾರಿತ ಪ್ರಜ್ಞೆಯನ್ನು ಭಾವೈಕ್ಯತೆಯ ಧರ್ಮಪ್ರಜ್ಞೆಯನ್ನು ಪೂರ್ವಿಕರು ನಮ್ಮ ದೇಶದಲ್ಲಿ ತಿಳಿಸಿದ್ದಾರೆ ಎಂದರು.
ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಪದ್ಮಾವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಶ್ರೀಗಳು ಕುಂದಾದ್ರಿಯನ್ನು ಮಾದರಿ ಕ್ಷೇತ್ರವಾಗಿ ಸಂರಕ್ಷಿಸಲು ಸರ್ಕಾರ ಮತ್ತು ಸಮಾಜ ಬಾಂಧವರ, ದಾನಿಗಳ ಸಹಕಾರ ಅಪಾರ. ಕ್ಷೇತ್ರದ ಅಭಿವೃದ್ಧಿ ಯೋಜನೆಗಳನ್ನು ಹಂತಹಂತವಾಗಿ ಅನುಷ್ಠಾನಗೊಳಿಸುವುದಾಗಿ ತಿಳಿಸಿದರು.
ಜಿನಭಜನೆ, ಲಪುಷ್ಪಾಲಂಕಾರದಿಂದ ಪೂಜೆ ನೆರವೇರಿದವು. ಶ್ರೀ ಮಠದ ಆಡಳಿತಾಧಿಕಾರಿ ಸಿ.ಡಿ.ಅಶೋಕ ಕುಮಾರ್, ತೀರ್ಥಹಳ್ಳಿಯ ಆಯುರ್ವೇದ ವೈದ್ಯ ಡಾ. ಜೀವಂಧರ್ ಜೈನ, ಶೃಂಗೇರಿಯ ಡಾ. ನಿರಂಜನ್, ಧರಣೇಂದ್ರ, ಮಲೆನಾಡು ಜೈನ ಮಿಲನ್ ಸದಸ್ಯರು ಇತರರಿದ್ದರು. ರಾತ್ರಿ ಲಕ್ಷದೀಪೋತ್ಸವ ನಡೆಯಿತು.