ನ್ಯೂಸ್

ಎಸ್​.ಎಲ್​.ಭೈರಪ್ಪ, ಸುಧಾಮೂರ್ತಿ ಅವರಿಂದ ಪದ್ಮಭೂಷಣ ಪುರಸ್ಕಾರ ಸ್ವೀಕಾರ: ರಾಷ್ಟ್ರಪತಿಯಿಂದ ಪ್ರಶಸ್ತಿ ಪ್ರದಾನ

ನವದೆಹಲಿ: ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಡಾ.ಎಸ್​.ಎಲ್. ಭೈರಪ್ಪ, ಮೂರ್ತಿ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, ಡಾ.ಖಾದರ್, ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ ಸೇರಿದಂತೆ ಹಲವರಿಗೆ ಇಂದು ಪದ್ಮಪ್ರಶಸ್ತಿಗಳನ್ನು ನೀಡಲಾಯಿತು.

ಪ್ರಸಕ್ತ ಸಾಲಿನ ಪದ್ಮಪ್ರಶಸ್ತಿಗಳನ್ನು ಜನವರಿಯಲ್ಲಿ ಘೋಷಿಸಲಾಗಿದ್ದು, ಈಗಾಗಲೇ ಮಾಜಿ ಸಿಎಂ ಎಸ್​.ಎಂ.ಕೃಷ್ಣ ಸೇರಿದಂತೆ ಹಲವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಉಳಿದ ಕೆಲವರಿಗೆ ಇಂದು ಪ್ರಶಸ್ತಿ ಪ್ರದಾನ ಮಾಡಲಾಗಿದೆ. ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದರು.

ಎಸ್​.ಎಲ್. ಭೈರಪ್ಪ, ಸುಧಾಮೂರ್ತಿ ಅವರು ಇಂದು ಪದ್ಮಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸ್ವೀಕರಿಸಿದರು. ಹಾಗೆಯೇ 'ಮಿಲೆಟ್ ಮ್ಯಾನ್ ಆಫ್ ಇಂಡಿಯಾ' ಎಂದೇ ಹೆಸರಾಗಿರುವ ಡಾ.ಖಾದರ್, 'ಆರ್​ಆರ್​ಆರ್​' ಚಿತ್ರದ 'ನಾಟು ನಾಟು' ಗೀತೆ ಖ್ಯಾತಿಯ ಎಂ.ಎಂ.ಕೀರವಾಣಿ ಅವರಿಗೆ ಇಂದು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇವರೊಂದಿಗೆ ದೇಶದ ವಿವಿಧೆಡೆಯ ಇನ್ನೂ ಕೆಲವು ಸಾಧಕರು ಕೂಡ ಪದ್ಮಪ್ರಶಸ್ತಿ ಸ್ವೀಕರಿಸಿದರು.

ದೇಶದಲ್ಲಿ ಈ ಸಲ ಒಟ್ಟು 106 ಮಂದಿಯನ್ನು ಪದ್ಮಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಆ ಪೈಕಿ 6 ಸಾಧಕರನ್ನು ಪದ್ಮವಿಭೂಷಣ, 9 ಸಾಧಕರನ್ನು ಪದ್ಮಭೂಷಣ ಮತ್ತು 91 ಸಾಧಕರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.