ನ್ಯೂಸ್

ಜನಮನದಲ್ಲಿ ನೆನಪು ಹಸಿರು

vinaymk1969

ತಮ್ಮ ಅಭಿನಯ ಮತ್ತು ಚಿತ್ರಗಳಿಂದ ಕನ್ನಡ ಚಿತ್ರರಂಗಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟ ಡಾ. ರಾಜಕುಮಾರ್ ಅವರು ಅಗಲಿ 14 ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ಬಿಡುಗಡೆಯಾದ ಹಲವು ಚಿತ್ರಗಳ ಮೂಲಕ ಒಂದಲ್ಲ ಒಂದು ರೀತಿಯಲ್ಲಿ ಅವರು ಜನರ ಮನಸ್ಸಿನಲ್ಲಿ ಹಸಿರಾಗಿದ್ದಾರೆ. ಬಹುಶಃ ಇಡೀ ಭಾರತೀಯ ಚಿತ್ರರಂಗದಲ್ಲೇ, ನಿಧನದ ನಂತರವೂ ಯಾರಾದರೊಬ್ಬ ನಟ ಬೇರೆ ಚಿತ್ರಗಳ ಮೂಲಕ ಜೀವಂತವಾಗಿದ್ದಾರೆಂದರೆ, ಅದು ರಾಜಕುಮಾರ್ ಮಾತ್ರ.

ಸಾಮಾನ್ಯವಾಗಿ ಯಾರೇ ನಿಧನರಾದರೂ, ಅವರು ನಮ್ಮನ್ನಗಲಿದ್ದಾರೆ ಎಂದು ಮನಸ್ಸು ಒಪ್ಪುವುದಿಲ್ಲ. ಅವರು ದೈಹಿಕವಾಗಿ ಇಲ್ಲದಿದ್ದರೂ, ಮಾನಸಿಕವಾಗಿ ಜತೆಗಿರುತ್ತಾರೆ ಎಂಬ ಭಾವನೆ ಇದ್ದೇ ಇರುತ್ತದೆ. ಅವರ ಕೆಲಸ, ಮಾಡಿದ ಸಾಧನೆಯಿಂದ ಅವರನ್ನು ಸದಾ ನೆನಪಿಸಿಕೊಳ್ಳುತ್ತಲೇ ಇರುತ್ತೇವೆ. ಕನ್ನಡದ ಮೇರುನಟ ಡಾ. ರಾಜಕುಮಾರ್ ಈ ಸಾಲಿನಲ್ಲಿ ಪ್ರಮುಖರು. ರಾಜ್ ಅಗಲಿ ಇಂದಿಗೆ 14 ವರ್ಷ. ಅವರಿಲ್ಲದ ಚಿತ್ರರಂಗ ಎನ್ನುವುದಕ್ಕಿಂತ, ಈ 14 ವರ್ಷಗಳಲ್ಲಿ ಅವರನ್ನು ಕನ್ನಡ ಚಿತ್ರರಂಗ ಯಾವತ್ತೂ ಮರೆತಿಲ್ಲ ಎನ್ನುವುದು ನಿಜ. ಇಷ್ಟು ವರ್ಷಗಳಲ್ಲಿ ಬೇರೆಬೇರೆ ಚಿತ್ರಗಳ ಮೂಲಕ ಒಂದಲ್ಲ ಒಂದು ರೀತಿಯಲ್ಲಿ ರಾಜಕುಮಾರ್ ಜನರ ಮನಸ್ಸಿನಲ್ಲಿ ಹಸಿರಾಗಿದ್ದಾರೆ.

ಭಾರತೀಯ ಚಿತ್ರರಂಗ ದಲ್ಲಿ ಹಲವು ದಿಗ್ಗಜ ನಟರು ಬಂದು ಹೋಗಿದ್ದಾರೆ. ನಿಧನದ ನಂತರ ಅವರ ಕೆಲಸ, ಕೊಡುಗೆ, ಸಾಧನೆಯ ಬಗ್ಗೆ ಹೆಚ್ಚು ಚರ್ಚೆಯಾಗುತ್ತದೆ. ಕೆಲವೊಮ್ಮೆ ಅವರ ಮೇಲಿನ ಅಭಿಮಾನವನ್ನು ಚಿತ್ರಗಳಲ್ಲೂ ನೋಡಬಹುದು. ಆ ನಟರ ಅತ್ಯುತ್ತಮ ಚಿತ್ರದ ದೃಶ್ಯವನ್ನೋ ಅಥವಾ ಹಾಡನ್ನೋ ಬೇರೆ ಚಿತ್ರಗಳಲ್ಲೂ ಬಳಸಿಕೊಳ್ಳಲಾಗುತ್ತದೆ. ಬಹುಶಃ ಭಾರತೀಯ ಚಿತ್ರರಂಗದಲ್ಲಿ ನಿಧನದ ನಂತರ ಒಬ್ಬ ನಟ ಅತೀ ಹೆಚ್ಚು ಬಾರಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ ಎಂದರೆ, ಅದು ರಾಜಕುಮಾರ್.

ಇದಕ್ಕೆ ಇತೀಚಿನ ಉದಾಹರಣೆ, ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’. ಅಲ್ಲಿ ನಾಯಕ ಎಂಟ್ರಿ ಕೊಡುವುದಕ್ಕೆ ಮುನ್ನವೇ, ‘ಭಕ್ತ ಪ್ರಹ್ಲಾದ’ ಚಿತ್ರದ ‘ಎಲ್ಲಿ ನಿನ್ನ ಹರಿ ...’ ದೃಶ್ಯದ ಮೂಲಕ ರಾಜಕುಮಾರ್ ಅಬ್ಬರಿಸುತ್ತಾರೆ. ಆ ಸನ್ನಿವೇಶ ಕೆಲವು ಕ್ಷಣಗಳ ಕಾಲ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ ಮೇಲೆ, ಚಿತ್ರದ ಅಸಲಿ ನಾಯಕನ ಎಂಟ್ರಿಯಾಗುತ್ತದೆ.

ಈ 14 ವರ್ಷಗಳಲ್ಲಿ ಈ ತರಹ ಅದೆಷ್ಟೋ ಚಿತ್ರಗಳಲ್ಲಿ ರಾಜಕುಮಾರ್ ಅವರನ್ನು ಪ್ರೇಕ್ಷಕರ ಎದುರು ಕರೆತರಲಾಗಿದೆ. ಅವರ ಅಭಿನಯದ ‘ಸತ್ಯ ಹರಿಶ್ಚಂದ್ರ’, ‘ಬಂಗಾರದ ಮನುಷ್ಯ’, ‘ಕಸ್ತೂರಿ ನಿವಾಸ’ ಸೇರಿದಂತೆ ಅದೆಷ್ಟು ದೃಶ್ಯಗಳು ಮತ್ತು ಹಾಡುಗಳನ್ನು ಬೇರೆ ಚಿತ್ರಗಳಲ್ಲಿ ಬಳಸಿಕೊಳ್ಳಲಾಗಿದೆಯೋ ಗೊತ್ತಿಲ್ಲ. ಉದಾಹರಣೆಗೆ, ‘ರಾಜ್ - ದಿ ಶೋಮ್ಯಾನ್’ ಚಿತ್ರದಲ್ಲಿ ನಾಯಕ, ಡಾ. ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಚಿತ್ರಮಂದಿರವೊಂದರ ಮುಂದಿರುವ ‘ಸತ್ಯ ಹರಿಶ್ಚಂದ್ರ’ ಕಟೌಟ್​ಗೆ ಹಾರ ಹಾಕುವ ಮೂಲಕ ನಾಯಕನ ಎಂಟ್ರಿ ಆಗುತ್ತದೆ. ‘ಒಂದು ಮೊಟ್ಟೆಯ ಕಥೆ’ ಚಿತ್ರದ ನಾಯಕನೂ ರಾಜಕುಮಾರ್ ಅವರ ಪರಮ ಅಭಿಮಾನಿಯೇ. ಅದೇ ಕಾರಣಕ್ಕೆ, ಚಿತ್ರದುದ್ದಕ್ಕೂ ರಾಜ್ ಅಭಿನಯದ ಹಲವು ಜನಪ್ರಿಯ ದೃಶ್ಯಗಳು ಚಿತ್ರದಲ್ಲಿ ಅಲ್ಲಲ್ಲಿ ಕಾಣಬಹುದು, ಕೇಳಬಹುದು. ‘ಮೂರನೇ ಕ್ಲಾಸ್ ಮಂಜ, ಬಿಕಾಂ ಭಾಗ್ಯ’ ಎಂಬ ಚಿತ್ರದಲ್ಲಿ ರಾಜಕುಮಾರ್ ಅಭಿನಯದ ‘ನೀ ನನ್ನ ಗೆಲ್ಲಲಾರೆ’ಯ ‘ಜೀವ ಹೂವಾಗಿದೆ’ ಎಂಬ ಹಾಡನ್ನು ಮರುಸೃಷ್ಟಿ ಮಾಡಲಾಗಿದೆ. ‘ಕಸ್ತೂರಿ ನಿವಾಸ’ದ ‘ಆಡಿಸಿ ನೋಡು ಬೀಳಿಸಿ ನೋಡು ...’ ಹಾಡಿನ ಸಾಹಿತ್ಯ ಮತ್ತು ಪರಿಕಲ್ಪನೆಯನ್ನು ಪುನೀತ್ ಅಭಿನಯದ ‘ರಾಜ್​ಕುಮಾರ್’ ಚಿತ್ರದಲ್ಲಿ ಹಲವು ಬದಲಾವಣೆಗಳೊಂದಿಗೆ ಬಳಸಿಕೊಳ್ಳಲಾಗಿದೆ.

ರಾಜ್ ಎಂಬ ಬಂಗಾರದ ಮನುಷ್ಯ: ಇನ್ನು ಇಷ್ಟು ಚಿತ್ರಗಳಲ್ಲಿ ರಾಜಕುಮಾರ್ ಅವರಿಗೆ ಅದ್ಭುತವಾಗಿ ಗೌರವ ಸಲ್ಲಿಸಿರುವುದು ‘ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರದಲ್ಲಿ. ಈ ಚಿತ್ರಕ್ಕೂ ‘ಬಂಗಾರದ ಮನುಷ್ಯ’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಹಾಗೆಯೇ ಆ ಚಿತ್ರದ ಯಾವೊಂದು ದೃಶ್ಯವನ್ನೂ ಬಳಸಿಕೊಂಡಿಲ್ಲ. ಈ ಹಿಂದೆ ನಿರ್ವಣವಾಗಿದ್ದ ರಾಜಕುಮಾರ್ ಕುರಿತ ಸಾಕ್ಷ್ಯಚಿತ್ರವೊಂದರಿಂದ ಕೆಲವು ದೃಶ್ಯಗಳನ್ನು ಮಾತ್ರ ಬಳಸಿಕೊಂಡು, ಅವರನ್ನು ಒಬ್ಬ ರೈತ ನಾಯಕನಂತೆ ಈ ಚಿತ್ರದಲ್ಲಿ ತೋರಿಸಲಾಗಿದೆ.

ಹೊಸ ತಂತ್ರಜ್ಞಾನದಲ್ಲಿ ಜನರ ಮುಂದೆ:ರಾಜಕುಮಾರ್ ಚಿತ್ರಗಳ ದೃಶ್ಯಗಳ ಮೂಲಕ ಅವರನ್ನು ನೆನಪಿಸುವುದರ ಜತೆಗೆ, ಅವರ ಕ್ಲಾಸಿಕ್ ಚಿತ್ರಗಳನ್ನು ಹೊಸ ತಂತ್ರಜ್ಞಾನದಲ್ಲಿ ಬಿಡುಗಡೆ ಮಾಡಿದ್ದು, ಈ 14 ವರ್ಷಗಳ ಹೊಸ ಬೆಳವಣಿಗೆಯಾಗಿತ್ತು. ‘ಸತ್ಯ ಹರಿಶ್ಚಂದ್ರ’ ಮತ್ತು ‘ಕಸ್ತೂರಿ ನಿವಾಸ’ ಚಿತ್ರಗಳು ಬ್ಲಾಕ್ ಆಂಡ್ ವೈಟ್​ನಲ್ಲಿ ಬಿಡುಗಡೆಯಾಗಿದ್ದವು. ಆ ಎರಡೂ ಚಿತ್ರಗಳನ್ನು ಕಲರ್​ಗೆ ಪರಿವರ್ತಿಸಿ ಬಿಡುಗಡೆ ಮಾಡಲಾಯ್ತು. ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಯಿತು. ಇನ್ನು ಕೆಲವು ವರ್ಷಗಳ ಹಿಂದೆ ‘ಆಪರೇಷನ್ ಡೈಮಂಡ್ ರಾಕೆಟ್’ ಚಿತ್ರವನ್ನು ಹೊಸ ತಂತ್ರಜ್ಞಾನದಲ್ಲಿ ಬಿಡುಗಡೆ ಮಾಡಲಾಗಿತ್ತು. ಆ ಚಿತ್ರ ಯಶಸ್ವಿಯಾಗುತ್ತಿದ್ದಂತೆಯೇ ‘ರಾಜ ನನ್ನ ರಾಜ’, ‘ದಾರಿ ತಪ್ಪಿದ ಮಗ’ ಮತ್ತು ‘ನಾನೊಬ್ಬ ಕಳ್ಳ’ ಚಿತ್ರಗಳನ್ನು 5.1 ಡಿಟಿಎಸ್ ಸೌಂಡ್​ನಲ್ಲಿ ಬಿಡುಗಡೆ ಮಾಡಲಾಯಿತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಬಾರಿ ‘ಭಾಗ್ಯವಂತರು’ ಚಿತ್ರ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಕಾರಣಾಂತರಗಳಿಂದ ಮುಂದಕ್ಕೆ ಹೋಗಿದೆ. ಹೀಗೆ ರಾಜಕುಮಾರ್ ಒಂದಲ್ಲ ಒಂದು ಚಿತ್ರಗಳ ಮೂಲಕ ಜನರ ಮನಸ್ಸಿನಲ್ಲಿ ಹಸಿರಾಗಿರುವುದು ವಿಶೇಷ. ಕನ್ನಡವಷ್ಟೇ ಅಲ್ಲ, ಬೇರೆ ಭಾಷೆಗಳಲ್ಲಿನ ಅವರ ಸಮಕಾಲೀನರಲ್ಲಿ ಯಾರಿಗೂ ಇಂಥ ಭಾಗ್ಯ ಸಿಕ್ಕಿಲ್ಲ ಎನ್ನುವುದು ಸತ್ಯ.

ಪುನರಾವರ್ತನೆಯಾದ ಶೀರ್ಷಿಕೆಗಳು: ರಾಜಕುಮಾರ್ ಅವರನ್ನು ಇನ್ನೊಂದು ರೀತಿಯಲ್ಲಿಯೂ ನೆನಪಿಸಲಾಯಿತು. ಅವರ ಹಲವು ಯಶಸ್ವಿ ಚಿತ್ರಗಳ ಶೀರ್ಷಿಕೆಯನ್ನು ಪುನಃ ಇಡುವ ಟ್ರೆಂಡ್ ಅನ್ನು ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನೋಡಬಹುದು. ರಾಜಕುಮಾರ್ ಅವರ ‘ತಾಯಿಗೆ ತಕ್ಕ ಮಗ’ ಶೀರ್ಷಿಕೆಯೇ ಬಹಳ ಅಪರೂಪವಾಗಿದ್ದು, ಅದನ್ನು ಇತ್ತೀಚೆಗೆ ಅಜೇಯ್ ರಾವ್ ಅವರ ಚಿತ್ರಕ್ಕೆ ಇಡಲಾಗಿತ್ತು. ಅದೇ ತರಹ ‘ಎರಡು ಕನಸು’, ‘ದೇವರು ಕೊಟ್ಟ ತಂಗಿ’ ಮುಂತಾದ ಹೆಸರುಗಳು ಪುನರಾವರ್ತನೆಯಾದವು. ಇನ್ನುರಾಜ್ ಮೊಮ್ಮಗ ಧೀರೇನ್ ನಾಯಕನಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರಕ್ಕೆ ‘ದಾರಿ ತಪ್ಪಿದ ಮಗ’ ಎಂದು ನಾಮಕರಣ ಮಾಡಲಾಗಿತ್ತಾದರೂ, ಈಗ ಚಿತ್ರಕ್ಕೆ ಬೇರೆ ಹೆಸರು ಇಡಲಾಗಿದೆ.

| ಚೇತನ್​ ನಾಡಿಗೇರ್​ (ಲೇಖಕರು ವಿಜಯವಾಣಿ ವಿಶೇಷ ಪ್ರತಿನಿಧಿ)

ಪ್ರತಿ ವರ್ಷ ಏಪ್ರಿಲ್ 12 ಬಂತೆಂದರೆ ಅಪ್ಪಾಜಿ ಸಮಾಧಿ ಬಳಿ ಸಾವಿರಾರು ಅಭಿಮಾನಿಗಳು ನೆರೆದಿರುತ್ತಿದ್ದರು. ಹಾರ ತಂದು ನಮಸ್ಕರಿಸಿ ಹೋಗುತ್ತಿದ್ದರು. ನಾವೂ ಮನೆ ಮಂದಿ ಸೇರಿದರೆ 300ಕ್ಕೂ ಹೆಚ್ಚು ಜನ ಆಗುತ್ತೇವೆ. ನಾವೆಲ್ಲರೂ ಹೋಗುತ್ತಿದ್ದೆವು. ಆದರೆ, ಈ ಬಾರಿ ಕರೊನಾದಿಂದ ಹಿನ್ನಡೆಯಾಗಿದೆ. ಸರ್ಕಾರವೇ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತಂದಿದ್ದರಿಂದ ಅದನ್ನು ಪಾಲಿಸಬೇಕಾಗಿರುವುದು ಎಲ್ಲರ ಕರ್ತವ್ಯ. ಅದು ನಮಗೂ ಅನ್ವಯಿಸುತ್ತದೆ. ಹಾಗಾಗಿ ಈ ಸಲದ ಅಪ್ಪಾಜಿ ತಿಥಿ ಮತ್ತು ಜಯಂತಿಯನ್ನು ಮನೆಯಲ್ಲಿಯೇ ಸರಳವಾಗಿ ಆಚರಿಸಲು ನಿರ್ಧರಿಸಿದ್ದೇವೆ. ಈ ಬಗ್ಗೆ ಅಭಿಮಾನಿಗಳಿಗೂ ಮನವಿ ಮಾಡುತ್ತೇವೆ. ಮನೆಯಲ್ಲಿಯೇ ಅಪ್ಪಾಜಿ ಫೋಟೋಗೆ ಪೂಜೆ ಮಾಡಿ ಆಶೀರ್ವಾದ ಪಡೆಯುತ್ತೇವೆ. ಅಭಿಮಾನಿಗಳು ಸಮಾಧಿ ಬಳಿ ಬಾರದಂತೆ ಈ ಮೂಲಕ ಕೇಳಿಕೊಳ್ಳುತ್ತೇನೆ. ಫೋಟೋಗೆ ಕೈ ಮುಗಿದರೆ ಸಾಕು ಅವರ ಆಶೀರ್ವಾದ ಸಿಕ್ಕಂತೆ. ಅಪ್ಪಾಜಿಯ ಸಿನಿಮಾ ನೋಡಿಕೊಂಡು ದಿನ ಕಳೆಯಿರಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ. | ರಾಘವೇಂದ್ರ ರಾಜಕುಮಾರ್