ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಮಹಾಸ್ವಾಮಿಗಳು ಇಂದು ಅವರ ನಿವಾಸದಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
‘‘ಹಿಂದೆ ಮಂಡಿ ಚಿಪ್ಪು ಸಮಸ್ಯೆಯಾಗಿತ್ತು. ಅದಕ್ಕೆ ಚಿಕಿತ್ಸೆ ಪಡೆದಾಗಿದೆ. ಈಗಲೂ ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಾರೆ’’ ಎಂದು ದೇವೇಗೌಡರ ನಿಕಟವರ್ತಿಗಳು ಶ್ರೀಗಳಿಗೆ ತಿಳಿಸಿದರು.
‘‘ಈಗಲೂ ಮುಖದಲ್ಲಿರುವ ಕಾಂತಿ, ಉತ್ಸಾಹ, ಶಕ್ತಿ ಎಲ್ಲವನ್ನೂ ನೋಡಿದರೆ ಬೇಗ ಗುಣಮುಖರಾಗುತ್ತಾರೆ’’ ಎಂದು ಶ್ರೀಗಳು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ದೇವೇಗೌಡರು, ‘‘ಯಾರನ್ನು ಅಂತ್ಯದಲ್ಲಿ ಹೇಗೆ ಕರೆಸಿಕೊಳ್ಳಬೇಕೆಂಬುದನ್ನು ಭಗವಂತ ನಿರ್ಧರಿಸುತ್ತಾನೆ’’ ಎಂದು ಹೇಳಿದರು. ‘‘ಆದರೆ ಅದನ್ನು ಸ್ವೀಕರಿಸಲು ನಾವೆಲ್ಲ ಸಿದ್ಧರಿರಬೇಕು, ಖುಷಿಯಿಂದ ಸ್ವೀಕರಿಸಬೇಕು, ಅದೇ ಜೀವನದ ಸಾಧನೆ’’ ಎಂದು ಶ್ರೀಗಳು ಹೇಳಿದಾಗ, ‘‘ನಾನು ಮಾನಸಿಕವಾಗಿ ಸಿದ್ಧನಿದ್ದೇನೆ’’ ಎಂದು ದೇವೇಗೌಡರು ಪ್ರತಿಕ್ರಿಯಿಸಿದರು.