ನ್ಯೂಸ್

ಸಾರ್ವಜನಿಕರ ಎದುರು ರೆವೆನ್ಯೂ ಇನ್ಸ್​ಪೆಕ್ಟೆರ್​ಗೆ ಕಪಾಳ ಮೋಕ್ಷ ಮಾಡಿದ ಚಿಕ್ಕಮಗಳೂರು ಜಿಲ್ಲಾಧಿಕಾರಿ

ಚಿಕ್ಕಮಗಳೂರು: ಪ್ರವಾಹ ವೇಳೆ ಜಿಲ್ಲಾಡಳಿತ ವರ್ತಕರಿಂದ ಖರೀದಿಸಿದ್ದ ಪಡಿತರಕ್ಕೆ ಹಣ ಪಾವತಿ ನೀಡದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಾರ್ವಜನಿಕರ ಎದುರು ರೆವೆನ್ಯೂ ಇನ್ಸ್​ಪೆಕ್ಟರ್​ಗೆ ಕಪಾಳ ಮೋಕ್ಷ ಮಾಡಿರುವ ಘಟನೆ ನಡೆದಿದೆ.

ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್​ ಅಧಿಕಾರಿಗಳ ಜೊತೆ ತೆರಳಿದ್ದರು. ಈ ವೇಳೆ ಕಳಸದಲ್ಲಿ ವೀಕ್ಷಣೆ ಮಾಡುತ್ತಿದ್ದಾಗ ವರ್ತಕರ ತಂಡ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಪ್ರವಾಹದ ವೇಳೆ ಜಿಲ್ಲಾಡಳಿತ ನಮ್ಮಿಂದ ಖರೀದಿಸಿದ್ದ ಪಡಿತರದ ಹಣ ಇನ್ನು ಪಾವತಿಯಾಗಿಲ್ಲ. ರೆವಿನ್ಯೂಇನ್ಸ್​ಪೆಕ್ಟರ್​ ಅಜ್ಜೇಗೌಡ ಹಣ ಪಾವತಿಗೆ ವಿಳಂಬ ಮಾಡುತ್ತಿದ್ದಾರೆ ಎಂದು ದೂರು ನೀಡಿದರು.

ವರ್ತಕರ ದೂರಿನಿಂದ ಸಿಟ್ಟಾದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್​ ಅವರು ಪಕ್ಕದಲ್ಲೇ ಇದ್ದ ಆರ್​ಐ ಅಜ್ಜೇಗೌಡ ಅವರ ಕೆನ್ನೆಗೆ ಬಾರಿಸಿ ಶೀಘ್ರವೇ ವರ್ತಕರಿಗೆ ಹಣ ಪಾವತಿ ಮಾಡುವಂತೆ ಸೂಚಿಸಿದರು.

ಜಿಲ್ಲಾಧಿಕಾರಿಗಳು ಕರ್ತವ್ಯ ನಿರ್ವಹಿಸದ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸುವುದು ಸೂಕ್ತವಾಗಿದೆ. ಆದರೆ ಸಾರ್ವಜನಿಕವಾಗಿ ಅವರ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)