ನ್ಯೂಸ್

ಸಂಸ್ಕೃತಿ ಉಳಿವಿಗೆ ನಾರಾಯಣಾಚಾರ್ಯ ಕೊಡುಗೆ ಅಪಾರ: ಹಿರಿಯ ಸಾಹಿತಿ ಡಾ.ಬಾಬು ಕೃಷ್ಣಮೂರ್ತಿ ಬಣ್ಣನೆ

ಬೆಂಗಳೂರು: ಅಪಾರ ಜ್ಞಾನ ಹೊಂದಿದ್ದ ವಿದ್ವಾಂಸ ಡಾ.ಕೆ.ಎಸ್​.ನಾರಾಯಣಾಚಾರ್ಯ ಅವರು ಪ್ರಾಚೀನ ಸಂಸ್ಕೃತಿಯ ಉಳಿವಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಬಾಬು ಕೃಷ್ಣಮೂರ್ತಿ ತಿಳಿಸಿದ್ದಾರೆ.

ಉದ್ಭವಃ, ಸಾಹಿತ್ಯ ಪ್ರಕಾಶನ, ಸುಬ್ಬು ಪಬ್ಲಿಕೇಷನ್ಸ್​ ವತಿಯಿಂದ ಎನ್​.ಆರ್​. ಕಾಲನಿಯ ಪತ್ತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 'ಡಾ.ಕೆ.ಎಸ್​.ನಾರಾಯಣಾಚಾರ್ಯ ಸಮ್ಮಾನ-ಸಭೆ' ಕಾರ್ಯಕ್ರಮದಲ್ಲಿ 'ಡಾ.ಕೆ.ಎಸ್.ನಾರಾಯಣಾಚಾರ್ಯ ಸಮ್ಮಾನ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಬರಹಗಳು ಮೌಲ್ಯಯುತವಾಗಿದ್ದಾಗ ಉತ್ತಮ ವಿಚಾರಗಳು ಸಮಾಜಕ್ಕೆ ತಲುಪುತ್ತವೆ. ಹೀಗಾಗಿ ಆಳವಾದ ಅಧ್ಯಯನದೊಂದಿಗೆ, ಐತಿಹ್ಯಗಳನ್ನು ಉಲ್ಲೇಖಿಸಿ ಬರಹಗಳು ರೂಪುಗೊಳ್ಳಬೇಕು ಎಂಬುದು ನಾರಾಯಣಾಚಾರ್ಯ ಅವರ ವಾದವಾಗಿತ್ತು ಎಂದರು.

ಡಾ.ಕೆ.ಎಸ್​.ನಾರಾಯಣಾಚಾರ್ಯ ದಾಖಲಿಸಿರುವ ಸಾಕಷ್ಟು ವಿಷಯಗಳು ಅಧ್ಯಯನಶೀಲವಾಗಿವೆ. ಇದು ಭವಿಷ್ಯದಲ್ಲಿ ಧರ್ಮ ಹಾಗೂ ಇತಿಹಾಸವನ್ನು ಅಧ್ಯಯನ ನಡೆಸಲು ಬಯಸುವವರಿಗೆ ಸಹಕಾರಿಯಾಗಲಿದೆ. ಸಾಕಷ್ಟು ಬಾರಿ ನಾನೂ ಅವರಿಂದ ಸಲಹೆ ಹಾಗೂ ಪೂರಕ ಮಾಹಿತಿ ಪಡೆದುಕೊಂಡು ಪುಸ್ತಕ ರಚಿಸಿರುವುದಾಗಿ ತಿಳಿಸಿದರು.

'ಸಂಸ್ಕೃತವು ಭಾರತದ ಹೊರಗಿನಿಂದ ಬಂದಿದೆಯೇ?' ವಿಷಯದ ಕುರಿತು ಡಾ.ಶಿವಶಂಕರ ಶಾಸ್ತ್ರಿ ಮಾತನಾಡಿ, ಸಂಸ್ಕೃತ ಭಾರತದ ಹೊರಗಿನಿಂದ ಬಂದಿದೆ ಎಂದು ಹೇಳುವ ವಾದ ಶುದ್ಧ ಅಸಂಬದ್ಧವಾಗಿದೆ. ಯುರೋಪ್​ನಲ್ಲಿ ಕೈಗಾರಿಕಾ ಕ್ರಾಂತಿ ಆರಂಭವಾಯಿತು. ಯುರೋಪಿಯನ್ನರು ನಂತರದಲ್ಲಿ ಇತರೆ ದೇಶಗಳ ಮೇಲೆ ದಾಳಿ ಮಾಡಿ, ಅಲ್ಲಿ ಬೇರೂರಲು ಪ್ರಯತ್ನಿಸಿದರು. ಹಾಗೆಯೇ ಭಾರತಕ್ಕೂ ಬಂದರು. ಬಳಿಕ ಇಲ್ಲಿನ ಸಂಸ್ಕೃತ ಹಾಗೂ ಭಾಷೆಗಳನ್ನು ತಿಳಿದುಕೊಂಡರು. ಸಾಕಷ್ಟು ಅಧ್ಯಯನದ ಬಳಿಕ ಭಾರತೀಯ ಸಂಸ್ಕೃತಿಯೇ ನಮ್ಮಮೂಲ ಎಂದು ನಿರ್ಧರಿಸಿದರು. ಯುರೋಪಿಯನ್​ ಹಾಗೂ ಸಂಸ್ಕೃತ ಭಾಷೆಯಲ್ಲಿ ಹಲವು ಪದಗಳು ಸಾಮ್ಯತೆ ಹೊಂದಿರುವುದನ್ನು ಅರಿತುಕೊಂಡರು ಎಂದು ತಿಳಿಸಿದರು.

'ಸಂಸ್ಕೃತ ಭಾರತೀಯ ಇತಿಹಾಸದ ಪ್ರಾಚಿನತೆ' ಕುರಿತು ನೀಲೇಶ್​ ಓಕ್​, 'ರಾಮಾಯಣ ಒಂದು ಅದ್ಭುತ' ಕುರಿತು ಯಶೋದೀಪ್​ ದೇವಧರ್​, ಕೆ.ಎಸ್​.ನಾರಾಯಣಾಚಾರ್ಯರ ಮಹಾಭಾರತದ ಆ 18 ದಿನಗಳು' ಕುರಿತು ಎಂ.ಆರ್.ದೀಪಕ್​ ವಿಷಯ ಮಂಡಿಸಿದರು.