ನ್ಯೂಸ್

ಡಬ್ಬಲ್ ಮರ್ಡರ್ ಪ್ರಕರಣದ ಸಂಬಂಧ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ

ಮಂಜುನಾಥ.ಕೆ

ಬೆಂಗಳೂರು: ಇತ್ತೀಚೆಗೆ ಅಮೃತಹಳ್ಳಿ ಪಂಪಾ ಬಡಾವಣೆಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣ ಸಂಬಂಧ ಅಮೃತಹಳ್ಳಿ ಠಾಣೆ ಪೊಲೀಸರು ೩೦ ದಿನಗಳೊಳಗೆ ತನಿಖೆ ಪೂರ್ಣಗೊಳಿಸಿ ನಾಲ್ವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಆರೋಪಿಗಳಾದ ದೇಶ್ಕಾಲ್ ನೆಟ್‌ವರ್ಕ್ ಪ್ರೈವೇಟೆ ಲಿಮಿಟೆಡ್(ಜಿ-ನೆಟ್) ಕಂಪನಿ ಮಾಲೀಕ ಅರುಣ್ ಕುಮಾರ್, ಶಬರೀಶ್ ಅಲಿಯಾಸ್ ಫೆಲೀಕ್ಸ್, ಸಂತೋಷ್ ಹಾಗೂ ವಿನಯ ರೆಡ್ಡಿ ವಿರುದ್ಧ ೧,೩೫೦ ಪುಟಗಳ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.
ಆರೋಪಿಗಳು ಅಮೃತಹಳ್ಳಿ ಪಂಪಾ ಬಡಾವಣೆಯಲ್ಲಿ ೬ನೇ ಅಡ್ಡರಸ್ತೆಯ ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಜು.೧೧ ರಂದು ಮಧ್ಯಾಹ್ನ ೩.೫೦ರ ಸುಮಾರಿಗೆ ನುಗ್ಗಿ ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಸುಬ್ರಮಣ್ಯ ಮತ್ತು ಮುಖ್ಯ ಕಾರ್ಯ ನಿರ್ವಾಹಕ ವಿನುಕುಮಾರ್‌ನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಅಮೃತಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳು ಬಂಧಿಸಿದ್ದರು.
೧೦೦ ಕ್ಕೂ ಅಧಿಕ ವಸ್ತುಗಳು ಜಪ್ತಿ:
ಕೊಲೆಯಾದ ಫಣೀಂದ್ರ ಮತ್ತು ವಿನುಕುಮಾರ್ ಈ ಹಿಂದೆ ಜಿ-ನೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಕೆಲಸ ಬಿಟ್ಟು ತಾವೇ ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಪ್ರಾರಂಭಿಸಿದ್ದರು. ಅಂತೆಯೆ ತಮ್ಮ ಜತೆಗೆ ಈ ಹಿಂದೆ ಜಿ-ನೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲ ನೌಕರರನ್ನು ತಮ್ಮ ಕಂಪನಿಗೆ ನೇಮಿಸಿಕೊಂಡಿದ್ದರು. ಹೀಗಾಗಿ ಜಿ-ನೆಟ್ ಕಂಪನಿ ಮಾಲೀಕ ಅರುಣ್, ಫಣೀಂದ್ರ ಮತ್ತು ವಿನುಕುಮಾರ್ ವಿರುದ್ಧ ದ್ವೇಷ ಸಾಧಿಸುತ್ತಿದ್ದ. ವ್ಯವಹಾರದಲ್ಲಿ ತನಗೆ ಪ್ರತಿ ಸ್ಪರ್ಧಿಗಳಾದ ಈ ಇಬ್ಬರನ್ನು ಹತ್ಯೆ ಮಾಡಲು ನಿರ್ಧರಿಸಿದ್ದ. ಇದಕ್ಕೆ ತನ್ನ ಉದ್ಯೋಗಿಗಳಾದ ಫೆಲೀಕ್ಸ್, ಸಂತೋಷ್, ವಿನಯ ರೆಡ್ಡಿ ಜತೆಗೂಡಿ ಸಂಚು ರೂಪಿಸಿದ್ದ. ಅದರಂತೆ ಅವರಿಗೆ ಮಾರಕಾಸ್ತ್ರ ಹಾಗೂ ಹಣಕಾಸಿನ ನೆರವು ನೀಡಿದ್ದ. ಹೀಗಾಗಿ ಆರೋಪಿಗಳು ಜೋಡಿ ಕೊಲೆ ಮಾಡಿದ್ದರು ಎಂಬುದು ತನಿಖೆಯಿಂದ ಬಯಲಾಗಿದೆ. ಪೊಲೀಸರು ಪ್ರಕರಣದ ತನಿಖೆ ವೇಳೆ ೧೦೦ಕ್ಕೂ ಅಧಿಕ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡಿದ್ದಾರೆ. ೨೨ ಪಂಚನಾಮೆ ಮಾಹಿತಿ, ೧೨೬ ಮಂದಿ ಸಾಕ್ಷಿದಾರ ಹೇಳಿಕೆ ಸೇರಿ ಒಟ್ಟು ೧,೩೫೦ ಪುಟಗಳ ದೋಷಾರೋಪಪಟ್ಟಿ ಸಿದ್ಧಪಡಿಸಿ ಘಟನೆ ನಡೆದ ೩೦ ದಿನಗಳೊಳಗೆ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.