ನ್ಯೂಸ್

Double Yummy: ಒಂದೇ ಮಂಟಪದಲ್ಲಿ ಲವ್ವರ್​ ಹಾಗೂ ಮತ್ತೊಬ್ಬಾಕೆಗೆ ತಾಳಿ ಬಿಗಿದ ಯುವಕ

ನವದೆಹಲಿ: Dobule Yummy ಎಂದರೆ ಇದಪ್ಪಾ. ಒಂದೇ ಮಂಟಪದಲ್ಲಿ ಪ್ರೇಮಿಕೆ ಜತೆಗೆ ಹಾಗೂ ಪಾಲಕರು ನೋಡಿ ನಿಗದಿಪಡಿಸಿದ ಯುವತಿಯೊಂದಿಗೆ ಯುವಕನೊಬ್ಬ ಸಪ್ತಪದಿ ತುಳಿದಿದ್ದಾನೆ.

ಮಧ್ಯಪ್ರದೇಶದ ಬೇತುಲ್​ ಸಮೀಪದ ಕೇರಿಯಾ ಎಂಬ ಗ್ರಾಮದಲ್ಲಿ ಈ ವಿವಾಹ ಸಂಪನ್ನವಾಗಿದೆ. ಸಂದೀಪ್​ ಉಯಿಕೆ ಎಂಬಾತ ಭೋಪಾಲ್​ನಲ್ಲಿ ಓದುತ್ತಿದ್ದಾಗ ಹೊಶಂಗಾಬಾದ್​ನ ಯುವತಿಯನ್ನು ಪ್ರೇಮಿಸುತ್ತಿದ್ದ. ಇವರ ಪ್ರೇಮದಾಟ ಮುಂದುವರಿದಿರುವಂತೆ ಆತನ ಪಾಲಕರು ಕೊಯಲಾರಿ ಎಂಬ ಗ್ರಾಮದ ಯುವತಿಯೊಂದಿಗೆ ವಿವಾಹ ನಿಷ್ಕರ್ಷಿಸಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ವಿಷಯ ಗ್ರಾಮದ ಪಂಚಾಯ್ತಿ ಕಟ್ಟೆಗೆ ಹೋಯಿತು. ಪಂಚಾಯ್ತಿಗೆ ಸಂದೀಪ್​ ಅಲ್ಲದೆ ಇನ್ನಿಬ್ಬರು ಯುವತಿಯರ ಮನೆಯವರನ್ನೂ ಕರೆಸಲಾಯಿತು. ಸಾಕಷ್ಟು ಚರ್ಚೆಯ ಬಳಿಕ ಇಬ್ಬರು ಯುವತಿಯರನ್ನು ಸಂದೀಪ್​ ವಿವಾಹವಾಗಬೇಕು ಎಂಬ ನಿರ್ಣಯಕ್ಕೆ ಬರಲಾಯಿತು. ಇದಕ್ಕೆ ಯುವತಿಯರಿಬ್ಬರೂ ಒಪ್ಪಿಕೊಂಡರು ಎನ್ನಲಾಗಿದೆ.

ಪಂಚಾಯ್ತಿ ನಿರ್ಣಯದಂತೆ ಕೇರಿಯಾ ಗ್ರಾಮದಲ್ಲಿ ವಿವಾಹ ಕಾರ್ಯಕ್ರಮ ಆಯೋಜಿಸಲ್ಪಟ್ಟಿತು. ಗ್ರಾಮಸ್ಥರೆಲ್ಲರ ಸಮ್ಮುಖದಲ್ಲಿ ಸಂದೀಪ್​ ಇಬ್ಬರೂ ಯುವತಿಯರಿಗೂ ಒಂದೇ ಮುಹೂರ್ತದಲ್ಲಿ ತಾಳಿ ಕಟ್ಟಿದ್ದಲ್ಲದೆ ಸಪ್ತಪದಿಯನ್ನೂ ತುಳಿದ.

ಈ ಮಾಹಿತಿ ಈಗ ಜಿಲ್ಲಾಡಳಿತಕ್ಕೆ ತಲುಪಿದ್ದು, ಇಬ್ಬಿಬ್ಬರು ಯುವತಿಯರನ್ನು ಹೇಗೆ ಮದುವೆಯಾಗಲು ಸಾಧ್ಯ ಎಂಬ ಪ್ರಶ್ನೆ ಎತ್ತಿದೆ. ಈ ಬಗ್ಗೆ ತನಿಖೆ ನಡೆಸಲು ನಿರ್ಧರಿಸಿದೆ. ಅಷ್ಟೇ ಅಲ್ಲ, ಕೋವಿಡ್​ನ ಈ ಸಂದರ್ಭದಲ್ಲಿ ಪೂರ್ವಾನುಮತಿ ಇಲ್ಲದೆ ವಿವಾಹ ಸಮಾರಂಭ ಆಯೋಜಿಸಿದ್ದ ಬಗ್ಗೆಯೂ ಘೋಡಾಡೋಂಗ್ರಿಯ ತಹಸೀಲ್ದಾರ್​ ಮೋನಿಕಾ ವಿಶ್ವಕರ್ಮ ಪ್ರಶ್ನೆ ಎತ್ತಿದ್ದು, ಈ ಬಗ್ಗೆಯೂ ತನಿಖೆಗೆ ಮುಂದಾಗಿದ್ದಾರೆ. ಹೀಗಾಗಿ ಈ ಮದುವೆ ಯುವಕನ ಪಾಲಿಗೆ Double Yummy ಆಗುವ ಬದಲು Double Whammy ಆಗಿ ಮಾರ್ಪಟ್ಟಿದೆ.