ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವ ದಮನ ಮಾಡುತ್ತಿದೆ ಎಂದು ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಆರೋಪಿಸಿವೆ. ರಾಜ್ಯಪಾಲರಿಗೆ ಅವಮಾನ ಖಂಡಿಸಿ, ಶಾಸಕರ ಭವನದಿಂದ ವಿಧಾನಸೌಧ ವರೆಗೆ ಸೋಮವಾರ ಪಾದಯಾತ್ರೆ ನಡೆಸಿದರು.
ಶಾಸಕರ ಭವನದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಉಭಯ ಪಕ್ಷಗಳ ನಾಯಕರು ಮಾಲಾರ್ಪಣೆ ಮಾಡಿದ ನಂತರ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಮೊಳಗಿಸಿದರು. ರಾಜ್ಯಪಾಲರಿಗೆ ಅಪಮಾನಿಸಿದ ಸರ್ಕಾರ ಅವರಿಂದಲೇ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣಾ ಫಲಕಗಳನ್ನು ಪ್ರದರ್ಶಿಸಿ, ಧಿಕ್ಕಾರದ ಮೊಳಗಿಸುತ್ತಾ ಕಾಲ್ನಡಿಗೆಯಲ್ಲಿ ಹೊರಟರು. ಇದೇ ಸಂದರ್ಭದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ ರಾಜ್ಯಪಾಲರು ಸರಿಯಿಲ್ಲವೆಂದು ಹೇಳುತ್ತಿರುವವರು ಅವರಿಂದಲೇ ಹೊಗಳಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇರುತ್ತಾಎಮರೋ ಇಲ್ಲವೋ ಎಂಬ ಚರ್ಚೆ ನಡೆಯುತ್ತಲೇ ಇದೆ. ಈ ನಡುವೆ ಮಾಜಿ ಸಿಎಂ ವೀರಪ್ಪ ಮೊಯಿಲಿಯವರು ಡಿ.ಕೆ.ಶಿವಕುಮಾರ್ ಸಿಎಂ ಆಗುವುದನ್ನು ಯಾರಿಂದಲೂ ತಪ್ಪಿಸಲಾಗದು, ಆಗೇ ಆಗುತ್ತಾರೆ ಎಂದು ಕಾರ್ಯಕ್ರಮದಲ್ಲಿ ಹೇಳಿದ್ದು, ಈ ವೇಳೆ ವೇದಿಕೆಯಲ್ಲಿದ್ದ ಡಿ.ಕೆ.ಶಿವಕುಮಾರ್ ಕಾಲಿನ ಕೆಳಗೆ ಹಾಲಿನ ಹೊಳೆಯೇ ಹರಿದಿರಬೇಕು. ಸಿಎಂ ಸಿದ್ದರಾಮಯ್ಯ ಅವರಿಗೆ ಇದು ಲಾಸ್ಟ್ ಬಜೆಟ್ ಆಗಬಹುದು. ಬೆಟ್ಟದಷ್ಟು ಸಾಲ ಮಾಡಿ ಡಿ.ಕೆ.ಶಿವಕುಮಾರ್ ಕೈಗೆ ಅಧಿಕಾರ ಹಸ್ತಾಂತರಿಸಿ ಹೋಗುತ್ತಾರೆ ಎಂದು ಆರ್.ಅಶೋಕ್ ಭವಿಷ್ಯ ನುಡಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಗ್ಯಾರಂಟಿ ಹೆಸರು ಹೇಳಿಕೊಂಡು ದಲಿತರಿಗೆ ಕಾದಿಟ್ಟ ಅನುದಾನ ನುಂಗಿ ನೀರು ಕುಡಿದಿದ್ದಾರೆ. ಸಂವಿಧಾನದ ಮುಖ್ಯಸ್ಥರಾದ ರಾಜ್ಯಪಾಲರಿಗೆ ಅವಹೇಳನ ಮಾಡಿದ್ದನ್ನು ಖಂಡಿಸಿ ಈ ಪ್ರತಿಭಟನೆ ನಡೆಸಿದ್ದೇವೆ ಎಂದು ತಿಳಿಸಿದರು.
ಅವಾಂತರ ಮಾಡಿಕೊಂಡು ಆರ್ಥಿಕ ಪರಿಸ್ಥಿತಿ ಅಧ್ವಾನ ಮಾಡಿ ಅಭಿವೃದ್ಧಿ ಕೆಲಸ ನಿಲ್ಲಿಸಿದ್ದಾರೆ. ಅತ್ತ ದಲಿತರ ಹಣ ಕಿತ್ತುಕೊಂಡರು, ಇತ್ತ ಗ್ಯಾರಂಟಿ ಫಲಾನುಭವಿಗಳಿಗೆ ನೆರವು ತಲುಪುತ್ತಿಲ್ಲ. ಅಧಿಕಾರಕ್ಕಾಗಿ ಹಪಾಹಪಿಸಿ ರಾಜ್ಯಪಾಲರ ಅಧಿಕಾರ ಮೊಟುಕುಗೊಳಿಸಲು, ವಿಶ್ವ ವಿದ್ಯಾಲಯಗಳನ್ನು ಮುಚ್ಚಲು ಮುಂದಾಗಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.
ಪಾದಯಾತ್ರೆಯು ವಿಧಾನಸೌಧ ಪಶ್ಚಿಮ ದ್ವಾರ ತಲುಪಿದ ಬಳಿಕ ಉಭಯ ಪಕ್ಷಗಳ ನಾಯಕರು ಸರ್ಕಾರದ ವಿರುದ್ಶ ಘೋಷಣೆಗಳನ್ನು ಮೊಳಗಿಸಿದ ನಂತರ ವಿಧಾನಸೌಧ ಪ್ರವೇಶಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ವಿ.ಸುನಿಲ್ ಕುಮಾರ್, ಮಹೇಶ್ ಟೆಂಗಿನಕಾಯಿ, ಜೆಡಿಎಸ್ ಶಾಸಕರಾದ ಟಿ.ಎ.ಶರವಣ, ಎಸ್.ಎಲ್.ಭೋಜೇಗೌಡ, ಕರಿಯಮ್ಮ ನಾಯಕ ಮತ್ತಿತರರು ಪಾಲ್ಗೊಂಡಿದ್ದರು.