ನ್ಯೂಸ್

ಸಿಎಂ ವಿರುದ್ಧ ದೋಸ್ತಿ ದಾಳ

ಮುಡಾ ಬದಲೀ ನಿವೇಶನ ಹಂಚಿಕೆ, ಕಾನೂನು ಸಮರಕ್ಕೆ ಭೂಮಿಕೆ ಪ್ರಾಸಿಕ್ಯೂಷನ್​ಗೆ ಅನುಮತಿಗಾಗಿ ರಾಜ್ಯಪಾಲರಿಗೆ ಮೊರೆಯ ಚಿಂತನೆ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಖ್ಯಮಂತ್ರಿ ಪತ್ನಿಗೆ 14 ಬದಲೀ ನಿವೇಶನ ಹಂಚಿಕೆ ಮಾಡಿರುವ ಪ್ರಕರಣದ ವಿರುದ್ಧ ಸಿಡಿದೆದ್ದು ಪ್ರತಿಪಕ್ಷ ಬಿಜೆಪಿ ಆರಂಭಿಸಿರುವ ಹೋರಾಟಕ್ಕೆ ಮಿತ್ರಪಕ್ಷ ಜೆಡಿಎಸ್ ಸಾಥ್ ನೀಡಲು ಸಮ್ಮತಿಸಿದೆ. ಇದೇ ಹೊತ್ತಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಕಾನೂನಿನ ಇಕ್ಕಳಕ್ಕೆ ಸಿಲುಕಿಸುವ ಹೊಸ ದಾಳ ಉರುಳಿಸಲು ‘ದೋಸ್ತಿ’ಗಳು ತೆರೆಮರೆಯಲ್ಲಿ ಸಿದ್ಧತೆ ನಡೆಸಿರುವ ಸುಳಿವು ವಿಜಯವಾಣಿಗೆ ಲಭ್ಯವಾಗಿದೆ. ಡಿನೋಟಿಫಿಕೇಷನ್ ಪ್ರಕರಣವೊಂದು ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರ ಸಿಎಂ ಸ್ಥಾನಕ್ಕೆ ಸಂಚಕಾರ ತಂದಿತ್ತು. ಅದೇ ಮಾದರಿ ಅಸ್ತ್ರವನ್ನು ಸಿದ್ದರಾಮಯ್ಯ ವಿರುದ್ಧ ಪ್ರಯೋಗಿಸುವಂತಹ ಕಾನೂನು ಸಮರಕ್ಕೆ ಭೂಮಿಕೆ ಸಿದ್ಧವಾಗಿದೆ. ಆಂತರಿಕವಾಗಿ ಹೆಣೆದಿರುವ ಈ ತಂತ್ರಗಾರಿಕೆ ಪ್ರಕಾರ ಕಾರ್ಯಾಚರಣೆಗೆ ಇಳಿದಲ್ಲಿ ಮುಡಾ ಅಕ್ರಮದ ವಿರುದ್ಧ ಮೂರನೇ ಹಂತದ ಸಮರ ಸಾರಿದಂತಾಗಲಿದೆ. 2023ರ ವಿಧಾನಸಭೆ ಚುನಾವಣೆಗೆ ಸಲ್ಲಿಸಿದ ಅಫಿಡವಿಟ್ ಆಧರಿಸಿ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಲು ನಿರ್ಧರಿಸಿಯಾಗಿದೆ.

ರ್ತಾಕ ಅಂತ್ಯದ ಛಲ: ಬೇಕಾಬಿಟ್ಟಿಯಾಗಿ ನಿವೇಶನಗಳ ಹಂಚಿಕೆಯಿಂದಾಗಿ 4 ಸಾವಿರ ಕೋಟಿ ರೂ.ಗೂ ಅಧಿಕ ನಷ್ಟವಾಗಿದೆ. ಸಿಎಂ ಪ್ರಭಾವದಿಂದ ನಿಯಮಗಳನ್ನು ಮುಡಾ ಉಲ್ಲಂಘಿಸಿದೆ ಎನ್ನುವುದು ಬಿಜೆಪಿ ವಾದವಾಗಿದೆ.

ಬಿಜೆಪಿ-ಜೆಡಿಎಸ್ ತಂತ್ರಗಳೇನು?

  • ಬಿಎಸ್​ವೈ ಪ್ರಕರಣದ ಮಾದರಿಯಲ್ಲೇ ಕಾರ್ಯತಂತ್ರ
  • ಡಿನೋಟಿಫಿಕೇಶನ್ ಆರೋಪ ಎದುರಿಸಿದ್ದ ಬಿಎಸ್​ವೈ
  • 2011ರಲ್ಲಿ ಬಿಎಸ್​ವೈ ವಿರುದ್ಧ ಪ್ರಾಸಿಕ್ಯೂಷನ್​ಗೆ ಸಮ್ಮತಿ
  • ಬಳಿಕ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದ ಬಿಎಸ್​ವೈ
  • ಅದೇ ಮಾದರಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಟ್ರಾಟಜಿ
  • ರಾಜ್ಯಪಾಲರಿಗೆ ಮುಡಾ ಅಕ್ರಮದ ದಾಖಲೆ ಸಲ್ಲಿಕೆ
  • ಪ್ರಕರಣಕ್ಕೆ ಸಂಬಂಧಿಸಿದ ವಸ್ತುಸ್ಥಿತಿ ಮನವರಿಕೆ
  • ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೋರಿಕೆ

2011ರಲ್ಲಿ ಏನಾಗಿತ್ತು?

ಯಡಿಯೂರಪ್ಪ ಸಿಎಂ ಆಗಿದ್ದಾಗ 2011ರ ಡಿನೋಟಿಫಿಕೇಷನ್ ಪ್ರಕರಣ ಕಾನೂನು ಸಂಕಷ್ಟ ತಂದೊಡ್ಡಿತ್ತು. ಬಿಎಸ್​ವೈ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಬೇಕು ಎಂಬ ಕೋರಿಕೆಗೆ ಅಂದಿನ ರಾಜ್ಯಪಾಲ ಅಸ್ತು ಎಂದಿದ್ದರು. ಬಿಎಸ್​ವೈ ವಿರುದ್ಧ ವಕೀಲರಾದ ಸಿರಾಜಿನ್ ಬಾಷಾ ಮತ್ತು ಬಾಲರಾಜ್ ಐದು ದೂರುಗಳನ್ನು ಸಲ್ಲಿಸಿ, ರಾಜ್ಯಪಾಲರಿಂದ ಪ್ರಾಸಿಕ್ಯೂಷನ್​ಗೆ ಅನುಮತಿ ಪಡೆದಿದ್ದರು. ಇದರಿಂದಾಗಿ ಬಿಎಸ್​ವೈ ಸಿಎಂ ಸ್ಥಾನವನ್ನೇ ಕಳೆದುಕೊಳ್ಳಬೇಕಾಯಿತು.

ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಎರಡು ಬೇಡಿಕೆಗಳನ್ನು ಸರ್ಕಾರದ ಮುಂದಿರಿಸಿ ವಿವಿಧ ಹಂತದ ಹೋರಾಟ ನಡೆಸಿದೆ. ಸರ್ಕಾರಕ್ಕೆ ಜಂಟಿ ಸಡ್ಡು: ವಿಧಾನ ಮಂಡಲದ ಅಧಿವೇಶನದ ಸೋಮವಾರ ಶುರುವಾಗಲಿದೆ. ಅದಕ್ಕೂ ಮುನ್ನವೇ ಎನ್​ಡಿಎ (ಬಿಜೆಪಿ-ಜೆಡಿಎಸ್) ಮಿತ್ರಪಕ್ಷಗಳು ಸಭೆ ಸೇರಿ ತಯಾರಿ ಮಾಡಿಕೊಂಡಿವೆ. ಮಹರ್ಷಿ ವಾಲ್ಮೀಕಿ ನಿಗಮದ ಹಣ ಕೊಳ್ಳೆ, ಮುಡಾ ಪ್ರಕರಣ ಹಾಗೂ ಎಸ್​ಸಿ, ಎಸ್​ಟಿ ಉಪ ಯೋಜನೆ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಕೆಯಾಗುತ್ತಿರುವುದನ್ನು ಮುಖ್ಯ ಅಸ್ತ್ರವಾಗಿಸಿಕೊಂಡು ಸದನ ಕದನಕ್ಕೆ ಸಜ್ಜಾಗಿದೆ. ರೈತರ ಆತ್ಮಹತ್ಯೆ, ಬೆಲೆಗಳ ಏರಿಕೆ, ಆರ್ಥಿಕ ಬಿಕ್ಕಟ್ಟು, ಅಭಿವೃದ್ಧಿ ಸ್ಥಗಿತ ಮತ್ತಿತರ ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರಕ್ಕೆ ಜಂಟಿಯಾಗಿ ಸಡ್ಡು ಹೊಡೆಯುವ ಉಮೇದಿಯಲ್ಲಿವೆ.

ಕಾನೂನು ಕುಣಿಕೆ ತಂತ್ರ: ಸಾವಿರಾರು ಕೋಟಿ ರೂ.ಗಳ ಅಕ್ರಮ, ಸಿಎಂ ಪತ್ನಿ ಹೆಸರು ತಳುಕು ಹಾಕಿಕೊಂಡಿರುವ ಮುಡಾ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಮಿತ್ರಪಕ್ಷಗಳ ಹಿರಿಯರು ಸಿಎಂಗೆ ಕಾನೂನು ಕುಣಿಕೆ ಬಿಗಿಗೊಳಿಸುವ ಕಾರ್ಯತಂತ್ರ ಹೆಣೆದಿದ್ದಾರೆ. ಮುಡಾ ಭೂಸ್ವಾಧೀನ, ಡಿನೋಟಿಫಿಕೇಷನ್, ಸಿಎಂ ಪತ್ನಿಗೆ ನಿವೇಶನಗಳ ಹಂಚಿಕೆಯವರೆಗೆ ಎಲ್ಲ ದಾಖಲೆಗಳು, ಸಾಂರ್ದಭಿಕ ಪುರಾವೆಗಳು, ತಾಂತ್ರಿಕ ಸಮಿತಿ ಹಾಗೂ ಮೈಸೂರು ಡಿಸಿ ನೀಡಿದ ವರದಿ ಇತ್ಯಾದಿ ಪುರಾವೆಗಳನ್ನು ಸಂಗ್ರಹಿಸಿದೆ.

ರಾಜ್ಯಪಾಲರಿಗೆ ಮೊರೆ: ಮುಡಾ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು, ವಸ್ತುಸ್ಥಿತಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್​ಗೆ ನೀಡಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಬೇಕು ಎಂದು ಮೊರೆಯಿಡುವ ವ್ಯೂಹವನ್ನು ವಿಪಕ್ಷಗಳ ನಾಯಕರು ರಚಿಸಿಕೊಂಡಿದ್ದಾರೆ. ರಾಜ್ಯಪಾಲರ ಭೇಟಿ ವೇಳೆ ಬಿ.ಎಸ್. ಯಡಿಯೂರಪ್ಪ ವಿರುದ್ಧ ಆಗಿನ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದನ್ನು ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಗೊತ್ತಾಗಿದೆ. ಸಿದ್ದರಾಮಯ್ಯ ವಿರುದ್ಧ ಹೋರಾಟಕ್ಕೆ ಸಿಕ್ಕ ಅಸ್ತ್ರವನ್ನು ಎಲ್ಲ ಆಯಾಮಗಳಿಂದ ಸಮರ್ಥವಾಗಿ ಬಳಸಿಕೊಂಡು ಆಡಳಿತ ಪಕ್ಷದ ತಂತ್ರಕ್ಕೆ ಪ್ರತಿತಂತ್ರ ಹೂಡಲು ಸಜ್ಜಾಗಿವೆ. ಸಂದರ್ಭ ಎದುರಾದರೆ ಕೆಲವರು ‘ತ್ಯಾಗ’ಕ್ಕೆ ಸನ್ನದ್ಧರಾಗಿಬೇಕು ಎಂದು ಸ್ವಪಕ್ಷೀಯ ನಾಯಕರಿಗೆ ದೋಸ್ತಿ ಸಂದೇಶ ನೀಡಿದೆ ಎಂದು ತಿಳಿದಿದೆ.

ಸಂದೇಶ ಹೊತ್ತೇ ಅಗಮನ?

ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಶಾಸಕರ ಜತೆಗೂಡಿ ಕಳೆದ ಗುರುವಾರವೇ ಉಭಯ ಪಕ್ಷಗಳ ಸಮನ್ವಯ ಸಭೆ ನಡೆಸಲು ಬಿಜೆಪಿ ರಾಜ್ಯ ನಾಯಕರು ಮುಂದಾಗಿದ್ದರು. ಆದರೆ, ಕೇಂದ್ರ ಸಚಿವರೂ ಆದ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ತಾವು ಬಂದ ಮೇಲೆಯೇ ಈ ಸಭೆ ನಡೆಸೋಣವೆಂಬ ಸಲಹೆ ನೀಡಿದ್ದರು ಎನ್ನಲಾಗಿದೆ. ಖಾತೆಯ ಜವಾಬ್ದಾರಿ ಭಾಗವಾಗಿ ಹೈದರಾಬಾದ್ ಪ್ರವಾಸ ಮುಗಿಸಿಕೊಂಡು ಶುಕ್ರವಾರ ಸಂಜೆ ಬೆಂಗಳೂರಿಗೆ ಧಾವಿಸಿದ ಎಚ್​ಡಿಕೆ, ಅಂದೇ ಸಂಜೆ ಸಮನ್ವಯ ಸಭೆಯಲ್ಲಿ ಭಾಗಿಯಾದರು. ಬಿಜೆಪಿ ವರಿಷ್ಠರ ಸಂದೇಶ ಹೊತ್ತೇ ಅವರು ಸಭೆಗೆ ಆಗಮಿಸಿದ್ದರು. ಮುಡಾ ಪ್ರಕರಣದಲ್ಲಿ ಬಿಜೆಪಿ ಪ್ರಯತ್ನ, ಹೋರಾಟದ ಮಾಹಿತಿ ಜತೆಗೆ ದಾಖಲೆಗಳನ್ನು ಪರಾಮಶಿಸಿದರು. ಅಧಿವೇಶನಕ್ಕೆ ಸೀಮಿತವಾಗಿ ಸಮನ್ವಯ ಸಭೆಯಲ್ಲಿ ಜಂಟಿ ಹೋರಾಟದ ತೀರ್ಮಾನ ಕೈಗೊಳ್ಳಲಾಗಿದೆ. ನಂತರದ ಮಾತುಕತೆಯಲ್ಲಿ ಕಾಂಗ್ರೆಸ್ ಸರ್ಕಾರದ ಹಗರಣಗಳ ಸರಣಿ, ಅದರಲ್ಲೂ ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣಗಳು ಸಿದ್ದರಾಮಯ್ಯ ಅವರತ್ತ ಬೊಟ್ಟು ಮಾಡಿವೆ ಎಂಬುದರತ್ತ ದೋಸ್ತಿ ನಾಯಕರು ಗಮನಹರಿಸಿದ್ದಾರೆ. ಕಾಂಗ್ರೆಸ್​ನ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಹೋರಾಟ ನಡೆಸಲು ಬಿಜೆಪಿ ರಾಜ್ಯ ನಾಯಕರಿಗೆ ವರಿಷ್ಠರು ಫರ್ವನು ಹೊರಡಿಸಿದ್ದು, ಕಾನೂನು ಸಮರಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.