ಬೆಂಗಳೂರು: ರಾಜ್ಯದಲ್ಲಿ ಪಡಿತರ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಮನೆ ಮನೆ ಸಮೀಕ್ಷೆ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಅರ್ಹರಿಗೆ ಅನುಕೂಲ, ನಿಗದಿತ ಮಾನದಂಡ ಪೂರ್ಣ, ವ್ಯರ್ಥ ಪೋಲು ತಡೆಯುವುದಕ್ಕಾಗಿ ಈ ಸಮೀಕ್ಷೆ ನಡೆಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಆದ್ಯತಾ ಪಡಿತರ ಚೀಟಿ (ಬಿಪಿಎಲ್) ಹೊಂದಿದವರು ಪೈಕಿ ಐದು ಲಕ್ಷಕ್ಕೂ ಹೆಚ್ಚು ಲಾನುಭವಿಗಳು ಕಳೆದ ಮೂರು ತಿಂಗಳಿಂದ ಪಡಿತರವನ್ನೇ ಪಡೆದಿಲ್ಲ. ಅಂದರೆ, ಇವರೆಲ್ಲ ಅನರ್ಹರೆಂದಲ್ಲ, ಆರೋಗ್ಯ ಸೇವೆಗಾಗಿ ಬಿಪಿಎಲ್ ಕಾರ್ಡ್ ಬಳಸುತ್ತಿರುವುದು ಗಮನಕ್ಕೆ ಬಂದಿದೆ ಎಂದರು.
ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಬಡು ಕುಟುಂಬಗಳಿಗೆ ವಾರ್ಷಿಕ ಐದು ಲಕ್ಷ ರೂ.ವರೆಗೆ ವೈದ್ಯಕೀಯ ಸೌಲಭ್ಯ ದೊರೆಯುತ್ತದೆ. ಇದಕ್ಕಾಗಿ ಬಿಪಿಎಲ್ ಪಡಿತರ ಚೀಟಿ ಬೇಕಾಗಿರುವ ಕಾರಣ ಬಳಸುತ್ತಿದ್ದಾರೆ. ಅರ್ಹರಿಗೆ ಪಡಿತರ ಜತೆಗೆ ಆರೋಗ್ಯ ಸವಲತ್ತು ಕಲ್ಪಿಸಲು ಸರ್ಕಾರ ಬಯಸುತ್ತದೆ.
ಮನೆ, ಮನೆ ಸಮೀಕ್ಷೆ ಸಂದರ್ಭದಲ್ಲಿ ಬಿಪಿಎಲ್, ಎಪಿಎಲ್ ಕುಟುಂಬಗಳನ್ನು ಇಲಾಖೆ ಸಿಬ್ಬಂದಿ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಬಿಪಿಎಲ್ ಚೀಟಿ ಹೊಂದಿದವರು ಸ್ವಯಂಪ್ರೇರಿತವಾಗಿ ಅಕ್ಕಿ ಬೇಡ, ವೈದ್ಯಕೀಯ ಸವಲತ್ತಿಗೆ ಸಾಕು ಎಂದು ಹೇಳಿದರೆ ದಾಖಲಿಸಲಾಗುವುದು. ಈ ಸಮೀಕ್ಷೆಗೆ ಕಾಲಮಿತಿಯೇನೂ ವಿಧಿಸಿಲ್ಲವೆಂದು ಕೆ.ಎಚ್.ಮುನಿಯಪ್ಪ ತಿಳಿಸಿದರು.
566 ಕೋಟಿ ರೂ. ಪಾವತಿ
ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ತಲಾ ಐದು ಕೆಜಿ ಅಕ್ಕಿ ಬದಲು 170 ರೂ.ಗಳನ್ನು ಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅರ್ಹರ ಪೈಕಿ ಈವರೆಗೆ 27 ಜಿಲ್ಲೆಗಳ 3,45,38,984 ಲಾನುಭವಿಗಳಿಗೆ ಒಟ್ಟು 566 ಕೋಟಿ ರೂ. ಪಾವತಿಸಲಾಗಿದೆ. ಚಿಕ್ಕಬಳ್ಳಾಪುರ, ಶಿವಮೊಗ್ಗ, ಉಡುಪಿ ಮತ್ತು ವಿಜಯನಗರ ಜಿಲ್ಲೆಗಳ ಉಳಿದ ಲಾನುಭವಿಗಳು ಜುಲೈ ಅಂತ್ಯದೊಳಗೆ ನಿಗದಿತ ಹಣ ಪಡೆಯಲಿದ್ದಾರೆ ಎಂದು ತಿಳಿಸಿದರು.
ನಗದು ಬದಲು ಹೆಚ್ಚುವರಿ ತಲಾ ಐದು ಕೆಜಿ ಅಕ್ಕಿ ವಿತರಣೆಗೆ ಕಾಲಾವಕಾಶ ಬೇಕು. ಮಾಸಿಕ 2.40 ಲಕ್ಷ ಅಕ್ಕಿ ಪೂರೈಕೆಗಾಗಿ ಟೆಂಡರ್ ಕರೆಯಲು ಸಿದ್ಧತೆಗಳಾಗುತ್ತಿವೆ. ಸ್ಥಳೀಯ ರೈತರಿಂದ ಖರೀದಿಗೆ ಸರ್ಕಾರ ಹಿಂದೇಟು ಹಾಕುತ್ತಿಲ್ಲ. ಇಷ್ಟರಲ್ಲೇ ರೈತ ಸಂಘಟನೆಗಳ ಮುಖಂಡರ ಸಭೆ ಕರೆದು ಯಾವ ರೀತಿ ಭತ್ತ ಬೇಕು ಎಂಬ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಕೆ.ಎಚ್.ಮುನಿಯಪ್ಪ ಉತ್ತರಿಸಿದರು.