ಕೋಲಾರ: ಕ್ಷೇತ್ರದ ಶಾಸಕನಾಗಿ ನಾನು ರೈತರಿಗೆ ಸಾಗುವಳಿ ಚೀಟಿ, ಹಕ್ಕುಪತ್ರಗಳ ಕೊಡಬೇಕು ಹೊರತಾಗಿ ಬೇರೆಯವರು ಕೊಡುವುದಲ್ಲ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅವರು ತಹಸೀಲ್ದಾರ್ ನಾಗರಾಜ್ ವಿರುದ್ಧ ಮಂಗಳವಾರ ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಗರಂ ಆದರು.
ಹಲವಾರು ವರ್ಷದಿಂದ ಸಾಗುವಳಿ ಚೀಟಿ ಹಾಗೂ ಹಕ್ಕು ಪತ್ರಗಳಿಗಾಗಿ ತಹಸೀಲ್ದಾರ್ ಕಚೇರಿಗೆ ಅಲೆದಾಡುತ್ತಿರುವ ಜನರಿಗೆ ಶಾಸಕರು ಹಕ್ಕುಪತ್ರ ವಿತರಿಸದೆ ಮತ್ಯಾರೂ ವಿತರಿಸಬೇಕು ಎಂದು ಪ್ರಶ್ನಿಸಿದರು.
ತಹಸೀಲ್ದಾರ್ ನಾಗರಾಜ್ ಪ್ರತಿಕ್ರಿಯಿಸಿ, ನನಗೆ ಗೊತ್ತಿಲ್ಲ ಸರ್. ಜಿಲ್ಲಾಧಿಕಾರಿ ತಿಳಿಸಿದ್ದಾರೆ. ನೀವು ಅವರನ್ನೇ ಕೇಳಿ ಎಂದು ಮೊಬೈಲ್‌ನಲ್ಲಿ ಸಂರ್ಪಕ ಕಲ್ಪಿಸಿದಾಗ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಶಾಸಕರೊಂದಿಗೆ ಮಾತನಾಡಿ, ಹೌದು ಕಂದಾಯ ಇಲಾಖೆಯಿಂದ ಸೂಚನೆ ಬಂದಿದೆ. ಬೃಹತ್ ಸಮಾವೇಶ ಆಯೋಜಿಸಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ವಿತರಿಸಬೇಕು ಎಂದು ತಿಳಿಸಲಾಗಿದೆ ಎಂದರು.
ಆಗ ಶಾಸಕರು ಸಾಗುವಳಿ ಚೀಟಿ ಮತ್ತು ಹಕ್ಕುಪತ್ರಗಳನ್ನು ಕುಂದುಕೊರತೆ ಸಭೆಗಳು ನಡೆಸುವ ಮೂಲಕ ದರಾಖಾಸ್ತು ಸಮಿತಿ ಸದಸ್ಯರ ಸಮ್ಮುಖದಲ್ಲಿ ಫಲಾನುಭವಿಗಳನ್ನು ಗುರುತಿಸಿ, ಸ್ಥಳ ಪರಿಶೀಲಿಸಿ ವರದಿ ಸಿದ್ದಪಡಿಸಿದವರು ನಾವು. ಇದನ್ನು ಕೊಡಲು ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆಸುತ್ತೀರಿ. ನಾನು ಕ್ಷೇತ್ರದ ಜನಪ್ರತಿನಿಧಿ, ನಾನು ಸಹ ಹಿಂದೆ ಸಚಿವನಾಗಿದ್ದೇ ಎಂದು ಬೇಸರಿಸಿದರು.
ಸರ್ಕಾರದ ಶಿಷ್ಟಾಚಾರ ಎಂದು ಸಮಾಧಾನ: ಮೊಬೈಲ್ ಕರೆ ಸಂಪರ್ಕದಲ್ಲಿಯೇ ಜಿಲ್ಲಾಧಿಕಾರಿ ಶಾಸಕರನ್ನು ಸಮಾಧಾನಿಸಿ, ಕಾರ್ಯಕ್ರಮ ನಿಮ್ಮ ಅಧ್ಯಕ್ಷತೆಯಲ್ಲಿ ನಡೆಯುವುದು. ಇದನ್ನು ಒಟ್ಟಾಗಿ ನೀಡಲು ಬೃಹತ್ ಸಮಾವೇಶ ಆಯೋಜಿಸಬೇಕು ಎನ್ನುವುದು ಸರ್ಕಾರದ ಶಿಷ್ಠಾಚಾರ ಪಾಲಿಸಬೇಕಿದೆ ಎಂದರು.
ಬಳಿಕ ಶಾಸಕರು ಅಯಿತು. ನೀವು ಯಾರಾದರೂ ಕೊಟ್ಟುಕೊಳ್ಳಿ ನನ್ನ ಅಭ್ಯಂತರವಿಲ್ಲ. ಆದರೆ ಫಲಾನುಭವಿಗಳಿಗೆ ವಿಳಂಬ ಮಾಡದೆ ಶೀಘ್ರವಾಗಿ ವಿತರಿಸುವಂತಾಗಬೇಕು ಎಂದು ತಹಸೀಲ್ದಾರ್ ನಾಗರಾಜ್‌ರಿಗೆ ಸೂಚಿಸಿದರು.
ವಕ್ಕಲೇರಿ ಕಾಲೇಜಿಗೆ ಜಾಗ ಮಂಜೂರು ಮಾಡಿ: ವಕ್ಕಲೇರಿಯಲ್ಲಿ ಕಾಲೇಜಿಗೆ ಸರ್ಕಾರಿ ಜಾಗವನ್ನು ಮಂಜೂರು ಮಾಡಲು ಕಳೆದ ಎರಡು ಮೂರು ಸಭೆಗಳಲ್ಲಿ ಈ ಕುರಿತು ಪ್ರಸ್ತಾಪಿಸಲಾಗಿತ್ತು, ಕೂಡಲೇ ಸ್ಥಳ ಪರಿಶೀಲಿಸಿ ಕಾಲೇಜಿಗೆ ಅಗತ್ಯವಾದ ಜಾಗ ಮಂಜೂರು ಮಾಡಬೇಕೆಂದು ತಿಳಿಸಿದರು.
ದಾಖಲೆ ಸಮರ್ಪಕವಾಗಿದ್ದರೆ ಸಾಗುವಳಿ ಚೀಟಿ: ಕೆರೆ, ಕಾಲುವೆ, ಸ್ಮಶಾನ ಜಾಗಗಳನ್ನು ಒತ್ತುವರಿ ಮಾಡಿರುವುದನ್ನು ಕೂಡಲೇ ತೆರವುಗೊಳಿಸಬೇಕು. ಈ ಜಾಗಗಳಿಗೆ ಸಾಗುವಳಿ ಚೀಟಿ ವಿತರಿಸಲು ಸಾಧ್ಯವಿಲ್ಲ. ಕಾನೂನು ಬದ್ಧ ದಾಖಲಾತಿಗಳು ಇದ್ದಲ್ಲಿ ಮಾತ್ರ ಸಾಗುವಳಿ ಚೀಟಿ ವಿತರಿಸಲಾಗುವುದು ಎಂದು ತಹಸೀಲ್ದಾರ್ ನಾಗರಾಜ್ ಅರ್ಜಿದಾರರಿಗೆ ತಿಳಿಸಿದರು.
ವೇಮಗಲ್ ಮತ್ತು ಕುರಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆಯಾಗಿದ್ದರೂ ಸಹ ತಹಸೀಲ್ದಾರ್ ಹಕ್ಕು ಪತ್ರ ವಿತರಸಬಹುದಾಗಿದೆ ಎಂದು ಶಾಸಕರ ಪ್ರಶ್ನೆಯೊಂದಕ್ಕೆ ಶಿರಸ್ತೇದಾರ್ ಶ್ರೀನಿವಾಸ್ ಉತ್ತರಿಸಿದರು.
ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಗ್ರಾಮಾಂತರ ಜನತೆ ಸಣ್ಣ, ಪುಟ್ಟ ಕೆಲಸಗಳಿಗೆ ತಹಸೀಲ್ದಾರ್ ಕಚೇರಿಗೆ ತಿಂಗಳಾನುಗಟ್ಟಲೆ ಅಲೆದಾಡುವಂತೆ ಮಾಡಬೇಡಿ. ಶೀಘ್ರವಾಗಿ ನಿರ್ದಿಷ್ಟ ಅವಧಿಯೊಳಗೆ ಅವರ ಕೆಲಸಗಳನ್ನು ಮಾಡಿಕೊಡಿ. ಕೆಲವರಿಗೆ ದಾಖಲಾತಿಗಳ ಬಗ್ಗೆ ಸಮಾಧಾನದಿಂದ ಅರ್ಥವಾಗುವಂತೆ ತಿಳಿಸಿ ಅವರ ಮೇಲೆ ರೇಗಾಡುವುದು ಬೇಡ ಎಂದು ಸಿಬ್ಬಂದಿಗೆ ಸಲಹೆ ನೀಡಿದರು.
ದರಾಖಾಸ್ತು ಸಮಿತಿ ಸದಸ್ಯರಾದ ಗೋವಿಂದರಾಜು, ಬೈಚಪ್ಪ, ಪವಿತ್ರಾ, ಸಿಬ್ಬಂದಿ ಶಿರಸ್ತೇದಾರ್ ಶ್ರೀನಿವಾಸ್, ಸುಲೋಚನಾ, ನಾಗಮಣಿ ಇದ್ದರು.