ನ್ಯೂಸ್

ನನ್ನ ತಾಳ್ಮೆ ಪರೀಕ್ಷಿಸಬೇಡಿ; ಮಿತ್ರ ಪಕ್ಷ ಎಐಎಡಿಎಂಕೆ ವಿರುದ್ಧ ಮತ್ತೆ ಗುಡುಗಿದ ಕೆ.ಅಣ್ಣಾಮಲೈ| K. Annamalai

ಕೊಯಮ್ಮತ್ತೂರು: ತಮಿಳುನಾಡಿನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಮುಂಚೆಯೇ ಬಿಜೆಪಿ ಮತ್ತು ಅಲ್ಲಿನ ವಿಪಕ್ಷ ಎಐಎಡಿಎಂಕೆ ಮೈತ್ರಿ ಮಾಡಿಕೊಂಡಿವೆ. ಆದರೆ ಎಐಎಡಿಎಂಕೆಯಲ್ಲಿ ಆಂತರಿಕ ಕಲಹ ಆರಂಭವಾಗಿದ್ದು, ರಾಜಕಾರಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಜೊತೆಗೆ ಆ ಕಲಹಲದಲ್ಲಿ ತಮ್ಮ ಹೆಸರು ಕೇಳಿ ಬಂದಿದ್ದಕ್ಕೆ ಶುಕ್ರವಾರ(ಅ. 31) ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ(K. Annamalai) ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಕೊಯಮ್ಮತ್ತೂರಿನಲ್ಲಿ ಮಾತನಾಡಿರುವ ಅಣ್ಣಾಮಲೈ ಅವರು, ಎಐಎಡಿಎಂಕೆ ನಾಯಕ ಕೆ.ಎ. ಸೆಂಗೊಟ್ಟೈಯನ್ ಅವರು ಇತ್ತೀಚೆಗೆ ಮಾಜಿ ಸಿಎಂ ಓ. ಪನ್ನೀರ್‌ಸೆಲ್ವಂ, ಟಿಟಿವಿ ದಿನಕರನ್ ನಡುವಿನ ಇತ್ತೀಚಿನ ಭೇಟಿಯಲ್ಲಿ ತಮ್ಮ ಪಾತ್ರವಿಲ್ಲ ಮತ್ತು ಈ ವಿಷಯಕ್ಕೆ ನನ್ನ ಹೆಸರನ್ನು ಎಳೆದು ತರುವುದು ಸರಿಯಲ್ಲ. ಮೂವರ ಭೇಟಿ ತಾನಾಗಿಯೇ ಸಂಭವಿಸಿದೆ. ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ, ಮತ್ತು ಊಹಾಪೋಹಗಳಿಗೆ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಎಐಎಡಿಎಂಕೆ ಹಿರಿಯ ನಾಯಕ ಕೆ.ಎ.ಸೆಂಗೊಟ್ಟೈಯನ್ ಅವರು ಸ್ವಾತಂತ್ರ್ಯ ಹೋರಾಟಗಾರ ಪಸುಂಪನ್ ಮುತ್ತುರಾಮಲಿಂಗ ದೇವರ 118 ನೇ ಜನ್ಮ ದಿನಾಚರಣೆಯ ನೆಪದಲ್ಲಿ ಪಕ್ಷದಿಂದ ಉಚ್ಚಾಟನೆಗೊಂಡಿರುವ ಮಾಜಿ ಸಿಎಂ ಓ. ಪನ್ನೀರ್​ಸೆಲ್ವಂ, ಟಿಟಿವಿ ದಿನಕರನ್ ಹಾಗೂ ವಿ.ಶಶಿಕಲಾ ಅವರನ್ನು ಭೇಟಿಯಾಗಿದ್ದರಿಂದ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ. ಈ ಹಿನ್ನೆಲೆ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ಅವರು ಕೆ.ಎ.ಸೆಂಗೊಟ್ಟೈಯನ್ ಅವರನ್ನು ನಿನ್ನೆ(ಅ. 31) ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ.

ಎಐಎಡಿಎಂಕೆಯಲ್ಲಿನ ಈ ಬೆಳವಣಿಗೆಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಕೆ.ಅಣ್ಣಾಮಲೈ ಅವರೇ ಕಾರಣ ಎಂದು ಕೆಲವು ಕಾರ್ಯಕರ್ತರು, ನಾಯಕರು ಆರೋಪಿಸಿದ್ದಾರೆ. ಇತ್ತೀಚೆಗೆ ಸೆಂಗೊಟ್ಟೈಯನ್ ಅವರು ಉಚ್ಚಾಟಿತ ನಾಯಕರನ್ನು ಭೇಟಿಯಾಗಿರುವಲ್ಲಿ ಅವರ ಪಾತ್ರವಿದೆ ಎಂದು ರಾಜಕೀಯ ಊಹಾಪೋಹಗಳು ಹರಡಿದ್ದವು.

ಇನ್ನೂ ಎಐಎಡಿಎಂಕೆ ನಾಯಕರ ಟೀಕೆಗೆ ಪ್ರತಿಕ್ರಿಯಿಸಿರುವ ಅವರು, ನಾನು ಮಾತನಾಡಲು ಪ್ರಾರಂಭಿಸಿದರೆ, ಅನೇಕ ವಿಷಯಗಳನ್ನು ಹೇಳುತ್ತೇನೆ. ನಾನು ಇನ್ನೂ ಎಐಎಡಿಎಂಕೆ ಬಗ್ಗೆ ಮಾತನಾಡಿಲ್ಲ. ಆದರೆ ಅವರ ನಾಯಕರು ನನ್ನನ್ನು ನಿಂದಿಸುತ್ತಲೇ ಇದ್ದಾರೆ. ಅಮಿತ್ ಶಾಗೆ ಕೊಟ್ಟ ಮಾತಿನಿಂದಾಗಿ ನಾನು ತಾಳ್ಮೆಯಿಂದ ಇದ್ದೇನೆ. ನನ್ನ ತಾಳ್ಮೆಯನ್ನು ಪರೀಕ್ಷಿಸಬೇಡಿ. ಅದಕ್ಕೂ ಒಂದು ಮಿತಿ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ತಮಿಳುನಾಡಿನಲ್ಲಿ ಶುದ್ಧ ರಾಜಕಾರಣ ಮಾಡಲು ನಾನು ಬಿಜೆಪಿಯೊಂದಿಗೆ ದೃಢನಿಶ್ಚಯದಿಂದ ಪ್ರಯಾಣ ಆರಂಭಿಸಿದ್ದೇನೆ. ಇಲ್ಲದಿದ್ದರೆ ನನ್ನ ಕೆಲಸ ಬಿಟ್ಟು ಬಿಜೆಪಿ ಸೇರುವ ಅಗತ್ಯವಿರಲಿಲ್ಲ. ಉತ್ತಮ ಆಡಳಿತವನ್ನು ನೀಡಲು ಸಾಧ್ಯವಾಗುತ್ತದೆ ಎಂಬ ಭರವಸೆಯಿಂದ ಮೈತ್ರಿಕೂಟಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಯಾರು ಉಳಿಯಬೇಕು, ಯಾರೂ ಹೇಗೆ ವರ್ತಿಸಬೇಕು ಎಂದು ನಿರ್ದೇಶಿಸುವ ಅಧಿಕಾರ ನನಗಿಲ್ಲ. ನನಗೆ ಏನಾದರೂ ಇಷ್ಟವಾದರೆ ಅದನ್ನು ಹೇಳುತ್ತೇನೆ. ರಾಜಕಾರಣ ಬೇಡ ಅನ್ನಿಸಿದ್ರೆ ತ್ಯಜಿಸಿ ಕೃಷಿ ಕೆಲಸಕ್ಕೆ ಹಿಂದಿರುಗುತ್ತೇನೆ. ಆದರೆ ಸಮಯ ಬಂದಾಗ ಎಲ್ಲವನ್ನೂ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)