Rajnath Singh  
ನ್ಯೂಸ್

ಭಾರತದ ತಾಳ್ಮೆ ಪರೀಕ್ಷಿಸಬೇಡಿ; ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್| Rajnath singh

ದೆಹಲಿ: ಭಾರತದ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದು, ನಿಮ್ಮ ವರ್ತನೆ ಹೀಗೆ ಮುಂದುವರೆದರೆ ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ದೇಶವು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ಆಪರೇಷನ್ ಸಿಂಧೂರ್‌ಗೆ ಪ್ರತಿಕ್ರಿಯೆಯಾಗಿ ಇಸ್ಲಾಮಾಬಾದ್ ಭಾರತದಲ್ಲಿ 15 ಮಿಲಿಟರಿ ಗುರಿಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ ನಂತರ ಈ ಎಚ್ಚರಿಕೆ ನೀಡಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತವು ಪಾಕಿಸ್ತಾನದ ಹಲವಾರು ಸ್ಥಳಗಳಲ್ಲಿ ವಾಯು ರಕ್ಷಣಾ ರಾಡಾರ್‌ಗಳನ್ನು ಗುರಿಯಾಗಿಸಿಕೊಂಡು ಲಾಹೋರ್‌ನಲ್ಲಿ ಸಮರ ಸಾರಿದೆ.

ರಾಜನಾಥ್ ಸಿಂಗ್ ಹೇಳಿದ್ದೇನು?

ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಗುಣಮಟ್ಟದ ಸಮಾವೇಶವನ್ನು ಉದ್ದೇಶಿಸಿ ರಾಜನಾಥ್ ಸಿಂಗ್ ಮಾತನಾಡಿದ್ದು, ನಾವು ಯಾವಾಗಲೂ ಜವಾಬ್ದಾರಿಯುತ ರಾಷ್ಟ್ರದಂತೆ ಬಹಳ ಸಂಯಮದಿಂದ ವರ್ತಿಸಿದ್ದೇವೆ. ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಾವು ನಂಬಿಕೆ ಇಡುತ್ತೇವೆ. ಆದರೆ ಇದರರ್ಥ ಯಾರಾದರೂ ನಮ್ಮ ತಾಳ್ಮೆಯನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದಲ್ಲ ಎಂದು ಸಿಂಗ್ ಹೇಳಿದ್ದಾರೆ. ಯಾರಾದರೂ ಅದರ ಅನಗತ್ಯ ಲಾಭ ಪಡೆಯಲು ಪ್ರಯತ್ನಿಸಿದರೆ, ಅವರು ಸೂಕ್ತ ಪ್ರತಿಕ್ರಿಯೆಯನ್ನು ಎದುರಿಸಲು ಸಿದ್ಧರಾಗಿರಬೇಕು ಎಂದಿದ್ದಾರೆ.

'ಆಪರೇಷನ್ ಸಿಂಧೂರ್' ಸಮಯದಲ್ಲಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಲಾಯಿತು, ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರನ್ನು ತಟಸ್ಥಗೊಳಿಸಲಾಯಿತು. ಕಾರ್ಯಾಚರಣೆಯನ್ನು ಊಹಿಸಲಾಗದ ನಿಖರತೆಯೊಂದಿಗೆ ಕಾರ್ಯಗತಗೊಳಿಸಲಾಯಿತು. ಅಮಾಯಕರಿಗೆ ಯಾವುದೇ ಹಾನಿಯಾಗದಂತೆ ಕಾರ್ಯಾಚರಣೆ ನಡೆಸಲಾಯಿತು ಎಂದು ರಾಜನಾಥ್ ಹೇಳಿದರು.

ನಮ್ಮ ಸಶಸ್ತ್ರ ಪಡೆಗಳು ಪ್ರದರ್ಶಿಸಿದ ಶೌರ್ಯ ಮತ್ತು ಧೈರ್ಯಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಅವರು ನಾಶಪಡಿಸಿದ ರೀತಿ ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ರಕ್ಷಣಾ ಸಚಿವರು ಹೇಳಿದರು.

(ಏಜೆನ್ಸೀಸ್)