ಬೆಂಗಳೂರು: ರಾಜ್ಯ ವನ್ಯಜೀವಿ ಮಂಡಲಿಗೆ ನಾನು ಸಚಿವರ ಪುತ್ರ ಎಂಬ ಕಾರಣಕ್ಕೆ ಸದಸ್ಯನಾಗಿ ನೇಮಿಸಲಾಗಿದೆ ಎನ್ನುವ ಆರೋಪ ಸರಿಯಲ್ಲ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀ ಪುತ್ರ ಧ್ರುವ ಪಾಟೀಲ ಸ್ಪಷ್ಟನೆ ನೀಡಿದ್ದಾರೆ.
ಮಂಡಳಿಗೆ ಈಗ ಸಾಕಷ್ಟು ವಿಜ್ಞಾನಿಗಳು, ಪರಿಸರ ತಜ್ಞರನ್ನು ನೇಮಿಸಲಾಗಿದೆ. ನಾನು ಯುವಜನಾಂಗದ ಪ್ರತಿನಿಧಿಯಾಗಿ ಅಲ್ಲಿ ಕೆಲಸ ಮಾಡಲಿದ್ದೇನೆ. ನನ್ನ ನೇಮಕಾತಿ ತಂದೆಯ ರಾಜಕಾರಣದೊಂದಿಗೆ ತಳುಕು ಹಾಕುವುದು ಬೇಡ ಎಂದು ಧ್ರುವ ಪಾಟೀಲ ಪ್ರತಿಪಾದಿಸಿದ್ದಾರೆ.
ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯನಾಗಿ ನನ್ನನ್ನು ನೇಮಿಸಿರುವುದಕ್ಕೂ ನಮ್ಮ ತಂದೆಯವರ (ಎಂ.ಬಿ ಪಾಟೀಲ) ರಾಜಕಾರಣಕ್ಕೂ ಸಂಬಂಧವಿಲ್ಲ. ವನ್ಯಜೀವಿ ಛಾಯಾಗ್ರಹಣ ಮತ್ತು ಸಂರಕ್ಷಣೆ ಕ್ಷೇತ್ರಗಳಲ್ಲಿ ನಾನು ಹನ್ನೊಂದು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಇದನ್ನು ಗುರುತಿಸಿ ನನ್ನನ್ನು ಈಗ ಸದಸ್ಯನಾಗಿ ನೇಮಿಸಲಾಗಿದೆ ಎಂದು ಹೇಳಿದ್ದಾರೆ.
ನಾನು ಅಮೆರಿಕದಲ್ಲಿ ಓದುತ್ತಿದ್ದರೂ ನಾಲ್ಕು ತಿಂಗಳ ರಜೆಯಲ್ಲಿ ಇಲ್ಲಿಗೆ ಬರುತ್ತೇನೆ. ಆ ದಿನಗಳಲ್ಲಿ ಮೂರು ತಿಂಗಳನ್ನು ನಾನು ಕಬಿನಿ, ಬಂಡೀಪುರ, ದಾಂಡೇಲಿ ಅರಣ್ಯ ಪ್ರದೇಶಗಳಲ್ಲೇ ಕಳೆಯುತ್ತೇನೆ ಎಂದು ಅವರು ಹೇಳಿದರು.
ಮನುಷ್ಯ ಮತ್ತು ವನ್ಯಜೀವಿ ಸಂಘರ್ಷ ಕುರಿತು ನಾನು ಸಾಕಷ್ಟು ಅಧ್ಯಯನ ಮಾಡಿದ್ದೇನೆ. ಜತೆಗೆ ಕಪ್ಪು ಚಿರತೆ ಹಾಗೂ ಹುಲಿ ಛಾಯಾಗ್ರಹಣ ಮಾಡಿದ್ದೇನೆ. ಅಲ್ಲದೆ, ವಿಜಯಪುರದ ವನ್ಯಜೀವಿ ಸಂಪತ್ತನ್ನು ಕುರಿತು ವೈಲ್ಡ್ ವಿಜಯಪುರ ಎನ್ನುವ ಸಾಕ್ಷ್ಯಚಿತ್ರ ಮಾಡಿದ್ದೇನೆ ಎಂದು ವಿವರಿಸಿದ್ದಾರೆ.
ಎಂಟು ವರ್ಷದ ಹುಡುಗನಾಗಿದ್ದ ದಿನಗಳಿಂದಲೂ ನಾನು ವನ್ಯಜೀವಿಗಳ ಬಗ್ಗೆ ಆಸಕ್ತಿ ಹೊಂದಿದ್ದೇನೆ. ಈಗ ವನ್ಯಜೀವಿ ಮಂಡಳಿಯ ಸದಸ್ಯನಾಗಿರುವುದು ಒಂದು ಅಧಿಕೃತ ಸ್ಥಾನಮಾನವಷ್ಟೆ. ಈ ಮೂಲಕ ವನ್ಯಜೀವಿ ಸಂರಕ್ಷಣೆಗೆ ರೂಪಿಸುವ ನೀತಿ ನಿರೂಪಣೆಗಳ ಮೇಲೆ ಸಕಾರಾತ್ಮಕ ಕೊಡುಗೆ ನೀಡಬಹುದು ಎನ್ನುವುದು ನನ್ನ ಭಾವನೆಯಾಗಿದೆ ಎಂದು ಧ್ರುವ ಹೇಳಿದ್ದಾರೆ.