ಪ್ರಭು ಯೇಸು ಕ್ರಿಸ್ತರು ಬೈಬಲಿನ ಸಂತ ಮತ್ತಾಯನ ಗ್ರಂಥ, ಅಧ್ಯಾಯ 7 ರಲ್ಲಿ ಹೀಗೆ ಹೇಳಿದ್ದಾರೆ: ‘ಬೇರೆಯವರನ್ನು ಅಳೆಯಬೇಡಿ, ಆಗ ಬೇರೆಯವರೂ ನಿಮ್ಮನ್ನು ಅಳೆಯಲಾರರು’ ಎಂದು. ನಾವು ಸದಾಕಾಲ, ಅವರು ಆ ತಪು್ಪ ಮಾಡಿದರು, ಇವರು ಈ ತಪು್ಪ ಮಾಡಿದರು, ಅವರ ತಪ್ಪಿಗೆ ಮರಣದಂಡನೆಯನ್ನೇ ಕೊಡಬೇಕು, ಇವರ ತಪ್ಪಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಬೇಕು ಎಂದೆಲ್ಲ ವಾದಿಸುವುದರಲ್ಲಿ ಅರ್ಥವಿಲ್ಲ. ಹಾಗೆಲ್ಲ ಬೇರೆಯವರನ್ನು ಅಳೆಯಲು ಹೋಗಬಾರದು ಎನ್ನುವುದೇ ಆ ಮಾತಿನ ಒಳಾರ್ಥ. ಸಾಮಾಜಿಕ ಜಾಲತಾಣಗಳಲ್ಲಿ ಈಗ ನಿತ್ಯವೂ ತಾವೇ ನ್ಯಾಯಾಧೀಶರಂತೆ ವರ್ತಿಸುವ ಹಲವರನ್ನು ಕಾಣಬಹುದು.
ಬೇರೆಯವರ ಕುರಿತು ಬೇಕಾಬಿಟ್ಟಿ ತೀರ್ಪು ನೀಡುತ್ತ ನಾನು ಹೇಳಿದ್ದೇ ಸತ್ಯ, ನಾನು ಹೇಳಿದ್ದೇ ವೇದವಾಕ್ಯ ಎನ್ನುವವರನ್ನು ಕಾಣುತ್ತಿರುವ ವರ್ತಮಾನ ನಮ್ಮದು. ಆದ್ದರಿಂದ, ಯಾವುದೇ ಒಂದು ಘಟನೆಯನ್ನು ಕಣ್ಣಾರೆ ನೋಡದೆ, ಕಿವಿಯಾರೆ ಕೇಳದೆ ಹಾಗೂ ಅದರ ಸತ್ಯಾಸತ್ಯತೆಯನ್ನು ತಿಳಿಯದೆ ನಿರ್ದಾಕ್ಷಿಣ್ಯವಾಗಿ ತೀರ್ಪು ನೀಡುತ್ತೇನಲ್ಲ? ಆ ಅಧಿಕಾರವನ್ನು ನನಗೆ ನೀಡಿದವರು ಯಾರು? ನಾನು ಅಥವಾ ನನ್ನ ಕುಟುಂಬ ಆ ವ್ಯಕ್ತಿಯ ಅಥವಾ ಕುಟುಂಬದ ಜಾಗದಲ್ಲಿದ್ದರೆ ನಾನು ಹಾಗೆ ವರ್ತಿಸುತ್ತಿದ್ದೆನೆ ಎಂದು ನಾವೆಲ್ಲ ಪ್ರಶ್ನಿಸಿಕೊಳ್ಳಬೇಕಿದೆ.
ಯೇಸು ಕ್ರಿಸ್ತರು ಅದೇ ಗ್ರಂಥದ ಅದೇ ಅಧ್ಯಾಯದಲ್ಲಿಯೇ ಇನ್ನೊಂದು ಮಾತು ಹೇಳುತ್ತಾರೆ: ನಿನ್ನ ಕಣ್ಣಿನಲ್ಲಿ ದೊಡ್ಡ ತೊಲೆಯನ್ನು ಇಟ್ಟುಕೊಂಡು ನಿನ್ನ ಸಹೋದರ- ಸಹೋದರಿಯರ ಕಣ್ಣಲ್ಲಿರುವ ರವೆಯನ್ನು ತೆಗೆಯಲು ಹೇಳುವ ಯಾವ ನೈತಿಕತೆ ನಿನಗಿದೆ? ನಿನ್ನ ಕಣ್ಣಲ್ಲಿರುವ ತೊಲೆಯನ್ನು ಮೊದಲು ತೆಗಿ. ನಿನ್ನ ಮನೆಯನ್ನು ಮೊದಲು ಶುದ್ಧ ಮಾಡು ಎಂದು. ನಾವು ಆ ಮಾತನ್ನು ಪಾಲಿಸಬೇಕಾಗಿದೆ. ನಮ್ಮ ನೆಲದ ಕಾನೂನಿಗೆ ನಾವು ಬೆಲೆ ನೀಡಲೇಬೇಕು. ಅನ್ಯಾಯದ ಗುಂಪು ತೀರ್ಪು ನೀಡಿ, ಸುಳ್ಳು ಕಥೆ ಕಟ್ಟಿ, ಯಾರದೋ ಮಾನಹಾನಿ ಮಾಡಿ, ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೃತ್ಯಕ್ಕೆ ಮುಂದಾಗಬಾರದು.