ಕೋಲಾರದ ಸುವರ್ಣ ಕನ್ನಡ ಭವನದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಿಂದ ಹಮ್ಮಿಕೊಂಡಿದ್ದ 2025&26ನೇ ಶೈಕ್ಷಣಿಕ ಸಾಲಿನ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಪುನಶ್ಚೇತನಾ ಕಾರ್ಯಕ್ರಮವನ್ನು ಎಸ್ಪಿ ಬಿ.ನಿಖಿಲ್​ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಎ.ಮುನಿಶಾಮಪ್ಪ, ಪ್ರಾಧ್ಯಾಪಕ ಪ್ರೊ.ಮುರಳೀಧರ್​, ಟಿ.ತಿಮ್ಮೇಗೌಡ ಇದ್ದರು. 
ನ್ಯೂಸ್

ಮನುಷ್ಯನನ್ನು ಜಾತಿ, ಧರ್ಮದಿಂದ ಅಳೆಯದಿರಿ

ಕೋಲಾರ: ಜಾತಿ, ಧರ್ಮದಿಂದ ಮನುಷ್ಯನನ್ನು ಅಳೆಯಬಾರದು. ಅಸ್ಪೃಶ್ಯತೆ ನಿಮೂರ್ಲನೆಗೆ ಕೆಲವರು ಮುಂದಾಗಿರುವುದು ಶ್ಲಾಘನೀಯ ಎಂದು ನಿವೃತ್ತ ಜಿಲ್ಲಾಧಿಕಾರಿ, ಕೃಷಿಕ್​ ಸವೋರ್ದಯ ಫೌಂಡೇಷನ್​ನ ಗೌರವ ಕಾರ್ಯದರ್ಶಿ ಟಿ.ತಿಮ್ಮೇಗೌಡ ಹೇಳಿದರು.

ನಗರದ ಸುವರ್ಣ ಕನ್ನಡ ಭವನದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಿಂದ 2025&26ನೇ ಶೈಕ್ಷಣಿಕ ಸಾಲಿನ ಪ್ರಥಮ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ಪುನಶ್ಚೇತನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಸ್ಪೃಶ್ಯತೆ ಇನ್ನೂ ಇದೆ. ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಂಡರೂ ಜನರ ಮನಸ್ಸಿನಿಂದ ಈ ಭಾವನೆ ಹೋಗದಿರುವುದು ದುರುದೃಷ್ಟಕರ ಎಂದರು.

ನಮ್ಮ ಮಾರ್ಗದರ್ಶಕರು, ಹೀರೋಗಳು ಎಪಿಜೆ ಅಬ್ದುಲ್​ ಕಲಾಂ ಅವರಂಥವರಾಗಬೇಕು. ಈಗಿನ ಪೀಳಿಗೆಗೆ ಕ್ರಿಕೆಟಿಗರು, ನಟರು ಮಾದರಿ ಆಗಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಈಚೆಗೆ ನಡೆದ ಕಾಲ್ತುಳಿತ ಪ್ರಕರಣ ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಇದು ಸ್ಪರ್ಧಾತ್ಮಕ ಯುಗ. ಇಲ್ಲಿ ಜ್ಞಾನವಂತರೇ ದೊರೆಗಳು. ವಿದ್ಯಾರ್ಥಿಗಳು ನಿತ್ಯ ಪತ್ರಿಕೆ ಓದಬೇಕು. ಆಗ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸುಲಭವಾಗುತ್ತದೆ. ಸಾಮಾನ್ಯ ಜ್ಞಾನ ಇದ್ದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್​ ವರಿಷ್ಠ್ಠಾಧಿಕಾರಿ ಬಿ.ನಿಖಿಲ್​ ಮಾತನಾಡಿ, ಯುವಕರಿಗೆ ಜೀವನದಲ್ಲಿ ಶಿಕ್ಷಣ ತುಂಬಾ ಮುಖ್ಯ. ಶಿಕ್ಷಣದಿಂದ ಉತ್ತಮ ಪ್ರಜೆಯಾಗುತ್ತಾರೆ. ಶಿಸ್ತಿನ ವ್ಯಕ್ತಿ ಜಗತ್ತಿನ ಶಕ್ತಿವಂತ ವ್ಯಕ್ತಿ. ಸೇನೆ, ಪೊಲೀಸ್​ನಲ್ಲಿ ಶಿಸ್ತಿಗೆ ಹೆಸರುವಾಸಿ. ಶಿಸ್ತಿನಿಂದಲೇ ಆ ಶಕ್ತಿ ಬಂದಿದೆ. ವಿದ್ಯಾಭ್ಯಾಸ ಮಾಡದವರು ಇವತ್ತೂ ಪಶ್ಚಾತ್ತಾಪಪಡುತ್ತಿದ್ದಾರೆ. ಶಿಕ್ಷಣ ಪಡೆಯಲು ತಮಗೆ ಅವಕಾಶ ಸಿಗಲಿಲ್ಲ, ಯಾರೂ ಮಾರ್ಗದರ್ಶನ ನೀಡಲಿಲ್ಲ ಎಂದು ಕೊರಗುತ್ತಿದ್ದಾರೆ. ಮನೆಗಳ್ಳರು, ರೌಡಿಗಳು, ಕೊಲೆಗಾರರಿಂದ ಹಿಡಿದು ಭೂಗತ ಪಾತಕಿಗಳವರೆಗೆ ಇದೇ ಮಾತು ಹೇಳುತ್ತಾರೆ. ಕಾಲವೇ ಎಲ್ಲರಿಗೂ ಪಾಠ ಕಲಿಸುತ್ತದೆ. ದೇಶದ ಜನಸಂಖ್ಯೆಯಲ್ಲಿ ಶೇ.60 ರಷ್ಟು ಯುವ ಜನತೆ ಇದ್ದಾರೆ. ಇವರೆಲ್ಲಾ 35 ವರ್ಷಕ್ಕಿಂತ ಕೆಳಗೆ ಇರುವವರು. ಅದು ಯುವಜನತೆಯ ಶಕ್ತಿ. ನಾವೆಲ್ಲರೂ ಸೇರಿ ಏನಾದರೂ ಮಾಡಬೇಕೆಂಬ ಯೋಜನೆ ಮಾಡಬೇಕು. ಆಗ ವಿಶ್ವಾಸ, ಭರವಸೆ ಬರುತ್ತದೆ ಎಂದರು.

ಯುಪಿಎಸ್​ ಪ್ರಿಲಿಮಿನರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಮನೋಜ್​ ಅವರನ್ನು ಸನ್ಮಾನಿಸಲಾಯಿತು.