ಸಾಗರ ನಗರಸಭೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಸಾರ್ವಜನಿಕರಿಂದ ಕುಂದುಕೊರತೆ ಅಹವಾಲು ಸ್ವೀಕರಿಸಿದರು. ಆರ್.ಯತೀಶ್, ದೃಷ್ಟಿ ಜೈಸ್ಪಾಲ್, ಎಚ್.ಕೆ.ನಾಗಪ್ಪ ಇತರರಿದ್ದರು.  
ನ್ಯೂಸ್

ವಿನಾಕಾರಣ ಜನರನ್ನು ಅಲೆದಾಡಿಸಬೇಡಿ

ಶಿವಕುಮಾರ ಎಸ್.ಪಿ.

ಸಾಗರ: ಸಾರ್ವಜನಿಕ ಕಚೇರಿಗೆ ಬರುವ ಜನರು ನಿಮ್ಮ ಆಳುಗಳಲ್ಲ. ಅವರು ತಮ್ಮ ಕೆಲಸಕ್ಕಾಗಿ ಬರುತ್ತಾರೆ. ಪದೇಪದೆ ಅವರನ್ನು ಅಲೆದಾಡಿಸಬೇಡಿ. ಸಾಗರ ನಗರಸಭೆಯಲ್ಲಿ ವ್ಯವಸ್ಥಿತವಾಗಿ ಕೆಲಸಗಳನ್ನು ಮಾಡುತ್ತಿಲ್ಲ. ಬಹಳಷ್ಟು ಸತಾಯಿಸುತ್ತಾರೆ ಎನ್ನುವ ದೂರುಗಳಿವೆ. ಇನ್ನೂ ನೀವು ತಿದ್ದಿಕೊಳ್ಳದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಸಿದರು.

ಸಾಗರ ನಗರಸಭೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಒಂದು ಕೆಲಸಕ್ಕೆ ಮೂರ‌್ನಾಲ್ಕು ಬಾರಿ ನಗರಸಭೆಗೆ ಅಲೆದಾಡಿಸುವುದು ಸೌಜನ್ಯವಲ್ಲ ಎಂದರು.

ನಗರಸಭೆಯಲ್ಲಿ ಬ್ರೋಕರ್‌ಗಳ ಹಾವಳಿ ಹೆಚ್ಚಳವಾಗಿದೆ. ಸಾರ್ವಜನಿಕರು ನಗರಸಭೆಗೆ ಬಂದು ರಾಜಾರೋಷವಾಗಿ ಕಡತಗಳನ್ನು ಪರಿಶೀಲಿಸುತ್ತಿದ್ದಾರೆ ಎನ್ನುವ ದೂರುಗಳಿವೆ. ನೀವು ಕೆಲಸ ಮಾಡಿಕೊಡದಿದ್ದರೆ ಜನರು ಸಹಜವಾಗಿ ಮಧ್ಯವರ್ತಿಗಳ ಬಳಿ ಹೋಗುವುದು ಅನಿವಾರ್ಯವಾಗುತ್ತದೆ. ಆದ್ದರಿಂದ ಜನರ ಕೆಲಸವನ್ನು ತಕ್ಷಣ ಮಾಡಿಕೊಡಿ ಎಂದು ತಾಕೀತು ಮಾಡಿದರು. ಬ್ರೋಕರ್ ಹಾವಳಿ ನಿಯಂತ್ರಿಸದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದರು.

ನಗರ ವ್ಯಾಪ್ತಿಯಲ್ಲಿ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಗಣಪತಿ ಕೆರೆ ಮೇಲ್ಭಾಗದಲ್ಲಿ ಇಂಟರ್‌ಲಾಕ್ ನೆಲಹಾಸು ಕಾಮಗಾರಿ ಕಳಪೆಯಾಗಿದೆ ಎಂದು ಮಾಜಿ ಶಾಸಕರು ದೂರಿದ್ದಾರೆ. ತಕ್ಷಣ ಪರಿಶೀಲನೆ ನಡೆಸಿ ಗುಣಮಟ್ಟ ಕಾಪಾಡಿ. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ. ಕಾಮಗಾರಿ ಕಳಪೆಯಾದರೆ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಿ. ನಗರ ವ್ಯಾಪ್ತಿಯಲ್ಲಿ22 ಕೋಟಿ ರೂ. ಅನುದಾನವನ್ನು ರಸ್ತೆ, ಚರಂಡಿ ಇನ್ನಿತರ ಕಾಮಗಾರಿಗೆ ಮೀಸಲಿರಿಸಲಾಗಿದೆ. ತಕ್ಷಣ ಕಾಮಗಾರಿ ಪ್ರಾರಂಭಿಸಿ ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಆರ್.ಯತೀಶ್, ಪ್ರೊಬೇಷನರಿ ಉಪವಿಭಾಗಾಧಿಕಾರಿ ದೃಷ್ಟಿ ಜೈಸ್ಪಾಲ್, ಪೌರಾಯುಕ್ತ ಎಚ್.ಕೆ.ನಾಗಪ್ಪ ಇತರರಿದ್ದರು.