ಉಡುಪಿ: ಕೋವಿಡ್19 ಲಸಿಕೆ ಕುರಿತಂತೆ ಸೋಷಿಯಲ್ ಮೀಡಿಯಾ ಅಪಪ್ರಚಾರಗಳಿಗೆ ಕಿವಿಗೊಡದೆ ಮುಕ್ತ ಮನಸ್ಸಿನಿಂದ ಲಸಿಕೆ ಸ್ವೀಕರಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಕರೆ ನೀಡಿದರು.
ನಗರದ ಸರ್ಕಾರಿ ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶುಕ್ರವಾರ ಕೋವಿಡ್-19 ಲಸಿಕೆ ಡ್ರೈರನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡಲು ಸಂಪೂರ್ಣ ಸಿದ್ಧತೆ ನಡೆಸಲಾಗಿದ್ದು, ಲಸಿಕೆ ವಿತರಣೆ ಸಂದರ್ಭದಲ್ಲಿ ಎದುರಿಸಬಹುದಾದ ಸವಾಲುಗಳನ್ನು ಸರಿಪಡಿಸಿಕೊಳ್ಳಲು ಡ್ರೈರನ್ ಅನುಕೂಲವಾಗಿದೆ ಎಂದರು.
ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಬೇಕಿದ್ದು, ಇದಕ್ಕಾಗಿ ಜಿಲ್ಲೆಯ 105 ಸರ್ಕಾರಿ ಮತ್ತು 762 ಖಾಸಗಿ ಆರೋಗ್ಯ ಸಂಸ್ಥೆಗಳ, 5688 ಸರ್ಕಾರಿ ಮತ್ತು 13874 ಖಾಸಗಿ ಆರೋಗ್ಯ ಸಿಬ್ಬಂದಿ ಸೇರಿದಂತೆ ಒಟ್ಟು 19562 ಫಲಾನುಭವಿಗಳಿಗೆ ನೀಡಲು ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡಿದೆ. ಲಸಿಕೆ ನೀಡುವ ಸಿಬ್ಬಂದಿಗೆ ತರಬೇತಿ ಹಾಗೂ ಅಗತ್ಯ ಕೊಠಡಿಗಳ ನಿರ್ಮಾಣ ಮಾಡಿಕೊಂಡಿದ್ದು ಡ್ರೈರನ್ ಎಂಬುವುದು ಕೋವಿಡ್ -19 ಲಸಿಕಾ ವಿತರಣಾ ಕಾರ್ಯಕ್ರಮವಾಗಿದ್ದು, ಲಸಿಕೆ ಸಾಗಾಟ, ವಿತರಣೆಗೆ ಅಗತ್ಯ ಯೋಜನೆಗಳನ್ನೂ ಸಹ ರೂಪಿಸಲಾಗಿದೆ ಎಂದು ಜಿ. ಜಗದೀಶ್ ಹೇಳಿದರು.
ಲಸಿಕೆ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಎಂ.ಜಿ.ರಾಮ ರಾಮ, ಜಿಲ್ಲಾ ಸರ್ಜನ್ ಡಾ. ಮಧುಸೂದನ ನಾಯಕ್, ಕೋವಿಡ್ ನೂಡಲ್ ಅಧಿಕಾರಿ ಡಾ.ಪ್ರಶಾಂತ ಭಟ್, ಮೆಡಿಕಲ್ ಸೂಪರಿಂಡೆಂಟ್ ಮತ್ತು ಬಿಆರ್‌ಎಸ್ ಆಸ್ಪತ್ರೆ ನೂಡಲ್ ಅಧಿಕಾರಿ ಡಾ.ಶಿಖಾ ಉಪಸ್ಥಿತರಿದ್ದರು.