ಶಿವಮೊಗ್ಗ: ವಿದ್ಯಾರ್ಥಿಗಳು ಸಮೂಹ ಸಂವಹನದೊಂದಿಗೆ ಬೆರೆತು ನಾವೀನ್ಯ ಯೋಜನೆಗಳನ್ನು ರೂಪಿಸುವಂತಾಗಬೇಕು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಮಾಜಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಶ್ರೀಕಂಠೇಶ್ವರಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಜೆಎನ್‌ಎನ್‌ಸಿಇಯಲ್ಲಿ ಸೋಮವಾರ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ನಾವೀನ್ಯತೆ ಮತ್ತು ಉದ್ಯಮಶೀಲತೆ ಕೇಂದ್ರ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ ಉಪನ್ಯಾಸಕರಿಗೆ ಪೇಟೆಂಟ್ ಫೈಲಿಂಗ್ ಮತ್ತು ಸಂಶೋಧನಾ ಪ್ರಸ್ತಾವನೆಗಳ ಬರವಣೆಗೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಯುವ ಸಮೂಹ ತಮ್ಮ ಸುತ್ತಲಿನ ವಾತಾವರಣದಲ್ಲಿರುವ ಸಮಸ್ಯೆಗಳನ್ನೇ ನಾವೀನ್ಯತೆಯ ಮೂಲಕ ಪರಿಹರಿಸುವ ಯೋಚನೆಗಳನ್ನು ಮಾಡಬೇಕಿದೆ. ಅಂತಹ ಪ್ರೇರಣಾ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಉತ್ತೇಜಿಸುವ ಕಾರ್ಯ ಉಪನ್ಯಾಸಕರಿಂದ ಆಗಬೇಕಿದೆ ಎಂದರು.
ಕೆಎಸ್‌ಸಿಎಸ್‌ಟಿ ಪೇಟೆಂಟ್ ಮಾಹಿತಿ ಕೇಂದ್ರದ ಎಂ.ಜಿ.ನಾಗಾರ್ಜುನ ಮಾತನಾಡಿ, ಕಲೆ, ವಾಣಿಜ್ಯ, ವಿಜ್ಞಾನ ಸೇರಿ ಪ್ರತಿಯೊಂದು ಕ್ಷೇತ್ರದಲ್ಲಿ ಪೇಟೆಂಟ್ ಫೈಲಿಂಗ್ ಮಾಡಬಹುದು. ಕೋಟ್ಯಂತರ ರೂ. ಆರ್ಥಿಕ ವ್ಯವಹಾರ ಕೇವಲ ನಾವೀನ್ಯ ಯೋಚನೆಯ ಪೇಟೆಂಟ್ ಫೈಲಿಂಗ್ ಮಾಡುವುದರ ಮೂಲಕ ನಡೆಸುತ್ತಿರುವವರು ಅನೇಕರಿದ್ದಾರೆ. ನಾವೀನ್ಯ ಯೋಚನೆಗೆ ಅಂತಹ ಶಕ್ತಿಯಿದೆ. ದೇಶದ ಅಭಿವೃದ್ಧಿಯ ಪ್ರತಿಯೊಂದು ಹಂತದಲ್ಲಿ ನಾವೀನ್ಯ ಯೋಚನೆಗಳು ಸ್ಥಾನ ಪಡೆದಿದೆ ಎಂದು ಹೇಳಿದರು.
ಎನ್‌ಇಎಸ್ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಮಾತನಾಡಿದರು. ಜೆಎನ್‌ಎನ್‌ಸಿಇ ಪ್ರಾಚಾರ್ಯ ಡಾ. ಪಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ನಾವೀನ್ಯತೆ ಮತ್ತು ಉದ್ಯಮಶೀಲತೆ ಕೇಂದ್ರದ ಯೋಜನಾ ವ್ಯವಸ್ಥಾಪಕ ಕೆ.ಎಲ್.ಅರುಣ್ ಕುಮಾರ್, ಸಿ.ಎಂ.ನೃಪತುಂಗ ಇತರರಿದ್ದರು.