ನವದೆಹಲಿ: ಕಾವೇರಿ ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್ನ ಆದೇಶದ ವಿರುದ್ಧವಾಗಿ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ವಿುಸುವ ಕರ್ನಾಟಕ ಸರ್ಕಾರದ ಯೋಜನೆಗೆ ಅನುಮತಿ ನೀಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿಗೆ ತಮಿಳುನಾಡಿನ ವಿರೋಧ ಪಕ್ಷವಾದ ಡಿಎಂಕೆ ಮನವಿ ಮಾಡಿದೆ.
ಮೇಕೆದಾಟು ಯೋಜನೆಯು ನದಿ ಕೆಳಪಾತ್ರದ ತಮಿಳುನಾಡಿನ ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ. ಆದ್ದರಿಂದ ಈ ಯೋಜನೆಗೆ ಅನುಮೋದನೆ ನೀಡದಂತೆ ಸಂಬಂಧಪಟ್ಟ ಸಚಿವಾಲ ಯಗಳಿಗೆ ಸೂಚನೆ ನೀಡಬೇಕು ಎಂದು ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಪತ್ರದಲ್ಲಿ ಕೋರಿದ್ದಾರೆ.
ಡಿಎಂಕೆ ಮುಖಂಡ ರಾದ ಟಿ.ಆರ್. ಬಾಲು, ದಯಾನಿಧಿ ಮಾರನ್ ಹಾಗೂ ಕನಿಮೋಳಿ ಅವರನ್ನು ಒಳಗೊಂಡ ನಿಯೋಗ ಪ್ರಧಾನಿ ಮೋದಿಯವರನ್ನು ಮಂಗಳವಾರ ಭೇಟಿಯಾಗಿ ಸ್ಟಾಲಿನ್ರ ಪತ್ರವನ್ನು ತಲುಪಿಸಿದೆ. ಇತ್ತೀಚೆಗೆ ನವದೆಹಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರಧಾನಿ ಹಾಗೂ ಕೇಂದ್ರದ ಕೆಲ ಸಚಿವರನ್ನು ಭೇಟಿ ಮಾಡಿದ್ದರು. ಈ ವೇಳೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ನೀಡುವಂತೆ ಕೋರಿದ್ದರು. ಇದನ್ನು ವಿರೋಧಿಸಿ ಪ್ರಧಾನಿಗೆ ಸ್ಟಾಲಿನ್ ಪತ್ರ ಬರೆದಿದ್ದಾರೆ. ಪ್ರಧಾನಿ ಭೇಟಿ ಬಳಿಕ ಮಾತನಾಡಿದ ಟಿ.ಆರ್. ಬಾಲು, ಪತ್ರವನ್ನು ಪರಿಶೀಲಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ ಎಂದಿದ್ದಾರೆ.