ನ್ಯೂಸ್

ಕರೊನಾ ಲಸಿಕೆ ಪಡೆಯಲು ಹಿಂಜರಿಕೆ ಬೇಡ; ಪ್ರಧಾನಿ ಮೋದಿ ಅಭಯ..

ನವದೆಹಲಿ: ಕರೊನಾ ಲಸಿಕೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ದೊರೆಯಬೇಕು. ಲಸಿಕೆ ಪಡೆಯುವುದಕ್ಕೆ ಇರುವ ಹಿಂಜರಿಕೆಯನ್ನು ಹೋಗಲಾಡಿಸುವುದು ಅಗತ್ಯ. ಸಾರ್ವಜನಿಕರು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್​ನಲ್ಲಿ ಮನವಿ ಮಾಡಿದ್ದಾರೆ.

ಕರೊನಾ ವಿರುದ್ಧ ನಮ್ಮ ಹೋರಾಟ ಮುಂದುವರಿದಿದೆ. ಜೂನ್ 21ರಂದು ದೇಶದ 86 ಲಕ್ಷಕ್ಕೂ ಅಧಿಕ ಜನರು ಉಚಿತವಾಗಿ ಲಸಿಕೆ ಪಡೆದುಕೊಂಡು ದಾಖಲೆ ಸೃಷ್ಟಿಸಿದರು. ಒಂದು ವರ್ಷದ ಹಿಂದೆ ಲಸಿಕೆ ಯಾವಾಗ ಬರುತ್ತದೆ? ಎಂಬ ಪ್ರಶ್ನೆ ಎಲ್ಲರ ಮುಂದಿತ್ತು. ಈಗ ನಾವು ಒಂದು ದಿನದಲ್ಲಿ ಲಕ್ಷಾಂತರ ಜನರಿಗೆ ಭಾರತದಲ್ಲೇ ತಯಾರಿಸಿದ ಲಸಿಕೆಯನ್ನು ಉಚಿತವಾಗಿ ನೀಡುತ್ತಿದ್ದೇವೆ. ಇದು ನವಭಾರತದ ಸಾಮರ್ಥ್ಯ ಎಂದು ಮೋದಿ ಹೇಳಿದರು.

ಮಧ್ಯಪ್ರದೇಶದ ಬೈತೂಲ್ ಜಿಲ್ಲೆಯ ಡುಲಾರಿಯಾ ಗ್ರಾಮದ ವ್ಯಕ್ತಿಗಳ ಜತೆ ದೂರವಾಣಿ ಮೂಲಕ ಮಾತ ನಾಡಿದ ಪ್ರಧಾನಿ, ಲಸಿಕೆ ಕುರಿತ ಭಯ ನಿವಾರಿಸಲು ಯತ್ನಿಸಿದರು. ನಾನು ಸ್ವತಃ ಲಸಿಕೆಯ ಎರಡೂ ಡೋಸ್​ಗಳನ್ನು ಪಡೆದುಕೊಂಡಿದ್ದೇನೆ. ನನ್ನ ತಾಯಿ ಸುಮಾರು 100 ವರ್ಷದವರು. ಅವರು ಕೂಡಾ ಎರಡೂ ಡೋಸ್​ಗಳನ್ನು ಪಡೆದುಕೊಂಡಿದ್ದಾರೆ. ಕೆಲವರಿಗೆ ಇದರಿಂದ ಜ್ವರ ಬರಬಹುದು. ಆದರೆ ಅದು ಸಾಧಾರಣವಾಗಿರುತ್ತದೆ. ಕೆಲವೇ ಗಂಟೆಗಳಲ್ಲಿ ಗುಣವಾಗುತ್ತದೆ. ಲಸಿಕೆ ಪಡೆದುಕೊಳ್ಳದೇ ಇರುವುದು ಬಹಳ ಅಪಾಯಕಾರಿ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು. ಕರೊನಾ ಮಾರ್ಗಸೂಚಿಗಳನ್ನು ಅನುಸರಿಸಿ. ಮಾಸ್ಕ್ ಧರಿಸುವುದು, ಸಾಬೂನಿನಿಂದ ಪದೆ ಪದೇ ಕೈತೊಳೆಯುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು. ಲಸಿಕೆ ಹಾಕಿಸಿಕೊಳ್ಳುವುದು. ಇದು ಕರೊನಾ ವಿರುದ್ಧ ಸುರಕ್ಷಾ ಕವಚವಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಪ್ರತಿಭೆಗಳಿಗೆ ಮೆಚ್ಚುಗೆ

ನಮ್ಮ ದೇಶದಲ್ಲಿ ಹೆಚ್ಚಿನ ಕ್ರೀಡಾಳುಗಳು ಸಣ್ಣ ಪುಟ್ಟ ಗ್ರಾಮಗಳು, ಹೋಬಳಿಗಳು ಮತ್ತು ಪುಟ್ಟ ತಾಲೂಕುಗಳಿಂದಲೇ ಹೊರಹೊಮ್ಮುತ್ತಾರೆ. ಟೋಕಿಯೊಗೆ ತೆರಳುತ್ತಿರುವ ನಮ್ಮ ಒಲಿಂಪಿಕ್ಸ್ ತಂಡದಲ್ಲೂ ಇಂತಹ ಹಲವಾರು ಕ್ರೀಡಾಳುಗಳಿದ್ದಾರೆ. ಇವರ ಜೀವನ ಪ್ರೇರಣಾದಾಯಕವಾಗಿದೆ ಎಂದು ಮೋದಿ ಹೇಳಿದರು. ಪ್ರವೀಣ್ ಜಾಧವ್, ನೇಹಾ ಗೋಯಲ್, ದೀಪಿಕಾ ಕುಮಾರಿ ಸಹಿತ ಹಲವು ಕ್ರೀಡಾಳುಗಳ ಸಾಧನೆ, ಜೀವನವನ್ನು ಅವರು ವಿವರಿಸಿದರು. ಟೋಕಿಯೊಗೆ ತೆರಳುತ್ತಿರುವ ನಮ್ಮ ಕ್ರೀಡಾಳುಗಳು ಬಾಲ್ಯದಲ್ಲಿ ಹಲವು ಅನಾನುಕೂಲತೆಗಳನ್ನು ಎದುರಿಸಿದ್ದಾರೆ. ಆದರೂ ಅವರು ಅಚಲವಾಗಿದ್ದರು, ನಿರಂತರ ಶ್ರಮಿಸುತ್ತಿದ್ದರು ಎಂದು ಶ್ಲಾಘಿಸಿದರು. ಸಾಮಾಜಿಕ ಜಾಲತಾಣದಲ್ಲಿ #Cheer4India ನೊಂದಿಗೆ ಕ್ರೀಡಾಳುಗಳಿಗೆ ಶುಭಕೋರಿ ಎಂದು ಮನವಿ ಮಾಡಿದರು.

ಮಿಲ್ಕಾ ಸಿಂಗ್ ಸ್ಮರಣೆ

ಕೆಲ ದಿನಗಳ ಹಿಂದೆ ಕರೊನಾದಿಂದ ಮಿಲ್ಕಾ ಸಿಂಗ್ ನಿಧನರಾದರು. ಅವರ ಸಂಪೂರ್ಣ ಕುಟುಂಬ ಕ್ರೀಡೆಗೆ ಸಮರ್ಪಿತವಾಗಿತ್ತು, ಭಾರತದ ಗೌರವವನ್ನು ಇದು ವೃದ್ಧಿಸಿದೆ. ಪ್ರತಿಭೆ, ಸಮರ್ಪಣಾಭಾವ, ಛಲ ಮತ್ತು ಕ್ರೀಡಾ ಮನೋಭಾವ ಒಗ್ಗೂಡಿದಾಗ ಮಾತ್ರ ಒಬ್ಬ ಚಾಂಪಿಯನ್ ಆಗಲು ಸಾಧ್ಯ ಎಂದರು.

ಮಳೆ ನೀರು ಸಂಗ್ರಹ: ಜಲ ಸಂರಕ್ಷಣೆ ದೇಶಸೇವೆಯ ಒಂದು ರೂಪ. ನಮ್ಮ ಸುತ್ತಮುತ್ತ ನೀರನ್ನು ಸಂರಕ್ಷಿಸಲು ಯತ್ನಿಸಬೇಕು. ಮುಂಗಾರಿನ ಈ ಮಹತ್ವದ ಸಮಯವನ್ನು ನಾವು ವ್ಯರ್ಥ ಮಾಡಬಾರದು ಎಂದು ಹೇಳಿದ ಪ್ರಧಾನಿ ಮೋದಿ, ಜಲಸಂರಕ್ಷಣೆಯಲ್ಲಿ ತೊಡಗಿದ ಹಲವು ಸಾಧಕರನ್ನು ಅಭಿನಂದಿಸಿದರು.

  • ಜುಲೈ 1 ರಂದು ನಾವು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಿದ್ದೇವೆ. ಕರೊನಾ ಸಮಯದಲ್ಲಿ ವೈದ್ಯರು ನೀಡಿದ ಕೊಡುಗೆಗಾಗಿ ನಾವೆಲ್ಲರೂ ಕೃತಜ್ಞರಾಗಿದ್ದೇವೆ.
  • ಹೋರಾಟದಲ್ಲಿ ದೇಶದ ಪ್ರತಿಯೊಬ್ಬರೂ ತಮ್ಮ ಪಾತ್ರ ನಿಭಾಯಿಸಿದ್ದಾರೆ.
  • ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವ ನಮಗೆ ಬಹು ದೊಡ್ಡ ಪ್ರೇರಣೆಯಾಗಿದೆ. ದೇಶಕ್ಕಾಗಿ ಬದುಕುವುದನ್ನು ನಾವು ಕಲಿಯೋಣ.
  • ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುತ್ತಾ, ಅವರಿಗೆ ಸಂಬಂಧಿಸಿದ ಚರಿತ್ರೆಯನ್ನು ಪುನರುಜ್ಜೀವಗೊಳಿಸಬೇಕು.
  • ಮೈ ಗವರ್ನಮೆಂಟ್ ವೆಬ್​ಸೈಟ್​ನಲ್ಲಿ ಒಲಿಂಪಿಕ್ಸ್ ಬಗ್ಗೆ ಇರುವ ರಸಪ್ರಶ್ನೆಗಳಿಗೆ ಉತ್ತರಿಸಿ, ಬಹುಮಾನಗಳನ್ನು ಗೆಲ್ಲಿ.